ಬಾಗಲಕೋಟೆ: ಕೋವಿಡ್ನಿಂದ ಮೃತರಿಗೆ ಸರ್ಕಾರದಿಂದ ಒಂದು ಲಕ್ಷ ರೂ. ಪರಿಹಾರ ಘೋಷಣೆ ಬೆನ್ನಲ್ಲೇ ಬಾಗಲಕೋಟೆಯಲ್ಲಿ ನಕಲಿ RTPCR ವರದಿ ಪ್ರಕರಣ ಪತ್ತೆಯಾಗಿದೆ. ಎರಡು ತಿಂಗಳ ಹಿಂದೆ ಮೃತಪಟ್ಟ ಮಹಿಳೆಗೆ ಇದೀಗ ಆರ್ಟಿಪಿಸಿಆರ್ ಪಾಸಿಟಿವ್ ರಿಪೋರ್ಟ್ ತಯಾರಿಸಿ, ಗೋಲ್ಮಾಲ್ ಮಾಡಿದ ಆರೋಪದಡಿ ಜಿಲ್ಲಾಸ್ಪತ್ರೆಯ ಇಬ್ಬರು ಸಿಬ್ಬಂದಿ ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳು ಅರೆಸ್ಟ್:
ಜಿಲ್ಲಾಸ್ಪತ್ರೆ ಸ್ಟಾಫ್ ನರ್ಸ್ ಬಸವರಾಜ್ ಬಿಲ್ಲಕೇರಿ ಹಾಗೂ ಡಾಟಾ ಎಂಟ್ರಿ ಆಪರೇಟರ್ ಬಸನಗೌಡ ಗಿರಿಯಪ್ಪಗೌಡರ ಸಿಕ್ಕಿ ಬಿದ್ದ ಆರೋಪಿಗಳು. ಇಬ್ಬರ ವಿರುದ್ಧ ಬಾಗಲಕೋಟೆ ನವನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೇ. 2 ರಂದು ಮೃತಪಟ್ಟವ್ರ ಹೆಸರಲ್ಲಿ ನಕಲಿ ದಾಖಲೆ:
ಕಳೆದ ಮೇ. 2 ರಂದು ಮುಧೋಳ ತಾಲೂಕಿನ ಬಿದರಿ ಗ್ರಾಮದ ಶೇಖವ್ವ (53) ಉಸಿರಾಟದ ತೊಂದರೆಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಸಿಟಿ ಸ್ಕ್ಯಾನ್ನಲ್ಲಿ ಕೋವಿಡ್ ಪತ್ತೆಯಾಗಿದ್ದು, ಆರ್ಟಿಪಿಸಿಆರ್ ಪರೀಕ್ಷೆ ಮಾಡಿರಲಿಲ್ಲ. ಇದೀಗ ಸರ್ಕಾರ ಕೋವಿಡ್ನಿಂದ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ ಹಿನ್ನೆಲೆ, ಸರ್ಕಾರದ ಪರಿಹಾರ ಪಡೆಯಲು ನಕಲಿ ದಾಖಲೆಯನ್ನು ಆಸ್ಪತ್ರೆ ಸಿಬ್ಬಂದಿ ಸೃಷ್ಟಿಸಿದ್ದಾರೆ ಎನ್ನಲಾಗ್ತಿದೆ.