ಬಾಗಲಕೋಟೆ: ರಾಜ್ಯದ ರಾಜಕಾರಣಿಗಳಿಗೆ ಸಂಬಂಧಿಸಿದಂತೆ ಸೋಮವಾರ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸುತ್ತೇನೆ ಎಂದು ಭ್ರಷ್ಟಾಚಾರ ವಿರೋಧಿ ಮತ್ತು ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ತಿಳಿಸಿದರು.
ನವನಗರದಲ್ಲಿರುವ ಪತ್ರಿಕಾಭವದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವ ವಿಷಯ ಬಹಿರಂಗಪಡಿಸುವುದಾಗಿ ಈಗ ಹೇಳುವುದಿಲ್ಲ. ಸೋಮವಾರ ನಾಡಿನ ಜನತೆಗೆ ರಾಜಕಾರಣಿಗಳ ಕುರಿತು ಮತ್ತೊಂದು ಗಂಭೀರ ವಿಷಯವನ್ನು ಬಹಿರಂಗಪಡಿಸುವುದಾಗಿ ಹೇಳಿದರು.
ಭ್ರಷ್ಟಾಚಾರ ವಿರೋಧಿ ಮತ್ತು ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಸುದ್ದಿಗೋಷ್ಠಿ ಮಾಜಿ ಮುಖ್ಯಮಂತ್ರಿಯೊಬ್ಬರು ಕೇರಳದ ವಯನಾಡ್ಗೆ ಹೋಗುತ್ತಿರುವುದು ಸತ್ಯ. ಏಳು ಜನ ಮಾಜಿ ಮುಖ್ಯಮಂತ್ರಿಗಳು ಇದ್ದರೂ ಒಬ್ಬರು ಮಾತ್ರ ಪ್ರತಿಕ್ರಿಯೆ ನೀಡಿದ್ದಾರೆ ಎಂದರು.
ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಯಾಕೆ ಮುಟ್ಟಿ ನೋಡಿಕೊಳ್ಳುತ್ತಾರೆ. ಸಾಮಾಜಿಕ ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡಬಾರದು. ಮಾಜಿ ಮುಖ್ಯಮಂತ್ರಿಯಾದವರು ಗೌರವಯುತವಾಗಿ ನಡೆದುಕೊಳ್ಳಬೇಕು. ನಾವೇನು ಅವರಂತೆ ಚಿತ್ರನಟಿಯನ್ನು ಮದುವೆಯಾಗಿ ಕೈ ಕೊಟ್ಟಿಲ್ಲ. ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೆಸರು ಹೇಳದೇ ಕುಮಾರಸ್ವಾಮಿ ಅವರ ಬಗ್ಗೆ ಹೇಳಿದರು.
ಸಿಡಿ ಪ್ರಕರಣದಲ್ಲಿ ಯಾರಿಗಾದರೂ ಸಂತ್ರಸ್ತರಿಗೆ ಅನ್ಯಾಯವಾಗಿದ್ದರೆ ಅವರ ಪರವಾಗಿ ನಿಲ್ಲುತ್ತೇನೆ. ನಿಜವಾದ ಸಂತ್ರಸ್ತರಿದ್ದರೆ ನ್ಯಾಯ ಸಿಗುತ್ತದೆ. ಆದರೆ, ನಕಲಿ ಸಂತ್ರಸ್ತೆಯಾಗಿದ್ದರೆ ನ್ಯಾಯ ಸಿಗುವುದಿಲ್ಲ ಎಂದರು.
ರಮೇಶ್ ಜಾರಕಿಹೊಳಿಯವರ ಸಿಡಿ ಪ್ರಕರಣದಲ್ಲಿ 5 ಕೋಟಿ ರೂ. ವ್ಯವಹಾರ ಆಗಿದೆ ಎಂದು ಮಾಧ್ಯಮದವರು ಕೇಳಿದಾಗ ಆ ಬಗ್ಗೆ ನನಗೆ ಮಾಹಿತಿ ಇಲ್ಲ. 19 ಜನ ರಾಜಕಾರಣಿಗಳ ಸಿಡಿ ನನ್ನ ಬಳಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಓದಿ: ಇಂದು ಅಪರಾಹ್ನ 12 ಗಂಟೆಗೆ ಬಜೆಟ್ ಮಂಡನೆ: ಬಿಎಸ್ವೈ ಟ್ವೀಟ್
ಉತ್ತರ ಕರ್ನಾಟಕದ ರಾಜಕಾರಣಿಗಳು ತಾಂತ್ರಿಕವಾಗಿ ಮುಗ್ಧರಾಗಿದ್ದಾರೆ. ಅವರಿಗೆ ಏನು ನಡೆಯುತ್ತದೆ ಎಂಬುದು ಸಹ ತಿಳಿಯದಷ್ಟು ಮುಗ್ಧ ರಾಜಕಾರಣಿಗಳು ಇರುವುದರಿಂದ ಇಂತಹ ಸಿಡಿಯಂತಹ ಪ್ರಕರಣ ಹೊರ ಬೀಳುತ್ತಿವೆ. ಇನ್ನಾದರೂ ಜಾಗೃತರಾಗಿರಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದೇನೆ. ಬೆಂಗಳೂರಿನಲ್ಲಿರುವವರೇ ಹೆಚ್ಚು ಅಧ್ಯಕ್ಷರಾಗುತ್ತಿದ್ದಾರೆ. ಹೊರಗಿನ ಭಾಗದವರಿಗೆ ಯಾಕೆ ಅವಕಾಶ ನೀಡುತ್ತಿಲ್ಲ. ಕನ್ನಡ ಸಾಹಿತ್ಯ ಪರಿಷತ್ನಲ್ಲಿಯೂ ಭಾರಿ ಭ್ರಷ್ಟಾಚಾರವಾಗುತ್ತಿದೆ. ಸಾಹಿತ್ಯ ಸಮ್ಮೇಳನದಲ್ಲಿ ನಕಲಿ ಬಿಲ್ ಹಚ್ಚಿ ದುಡ್ಡು ಹೊಡೆಯುವ ಕೆಲಸ ನಡೆಯುತ್ತಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದರು.