ಕರ್ನಾಟಕ

karnataka

ETV Bharat / state

ಸಿಗದ ಸಚಿವ ಸ್ಥಾನ: ಸಿಎಂ, ಹೈಕಮಾಂಡ್ ಮೇಲಿನ ಅಸಮಾಧಾನ ಹೊರಹಾಕಿದ ಈಶ್ವರಪ್ಪ

ಹೈಕಮಾಂಡ್ ಹಾಗೂ ಸಿಎಂ ನಡೆ ನನಗೆ ನೋವು ತಂದಿದೆ, ಅಪಮಾನ ಆಗ್ತಿದೆ. ಅದಕ್ಕೆ ಅಧಿವೇಶಕ್ಕೆ ಹೋಗದೆ ಸೌಜನ್ಯದ ಪ್ರತಿಭಟನೆ ಮಾಡುತ್ತಿದ್ದೇನೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

eshwarappa
ಕೆ ಎಸ್ ಈಶ್ವರಪ್ಪ

By

Published : Dec 19, 2022, 1:33 PM IST

ಬಾಗಲಕೋಟೆ ನಗರದಲ್ಲಿ ಮಾತನಾಡಿದ ಈಶ್ವರಪ್ಪ

ಬಾಗಲಕೋಟೆ: ಸಚಿವ ಸ್ಥಾನ ಸಿಗದ ಹಿನ್ನೆಲೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಬಾಗಲಕೋಟೆ ನಗರದಲ್ಲಿ ಮಾತನಾಡಿದ ಅವರು, ಬೆಳಗಾವಿಗೆ ಹೋಗುತ್ತೇನೆ, ಆದರೆ ಅಧಿವೇಶನಕ್ಕೆ ಹೋಗಲ್ಲ. ಅಧಿವೇಶನದಲ್ಲಿ ಇರಲ್ಲ ಅಂತ ಅಧ್ಯಕ್ಷರಿಗೆ ಪತ್ರ ಕೊಟ್ಟು ಅನುಮತಿ ತೆಗೆದುಕೊಳ್ಳೋಕೆ ಹೋಗ್ತೀನಿ. ಹೈಕಮಾಂಡ್ ಹಾಗೂ ಸಿಎಂ ನಡೆ ನೋವು ತಂದಿದೆ, ಅಪಮಾನ ಆಗ್ತಿದೆ. ಅದಕ್ಕೆ ಅಧಿವೇಶಕ್ಕೆ ಹೋಗದೇ ಸೌಜನ್ಯದ ಪ್ರತಿಭಟನೆ ಮಾಡುತ್ತಿದ್ದೇನೆ ಎಂದರು.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಅಪರಾಧದಿಂದ ಮುಕ್ತವಾದ ವ್ಯಕ್ತಿಗಳಿಗೆ ಯಾವ ಕಾರಣಕ್ಕೂ ಶಿಕ್ಷೆ ಆಗುವುದಿಲ್ಲ. ನನ್ನ ವಿಚಾರದಲ್ಲಿ ತೀರ್ಪು ಬಂದಾಗಿದೆ, ಕ್ಲೀನ್​ಚಿಟ್ ಸಿಕ್ಕಾಗಿದೆ. ನಿಮ್ಮನ್ನು ಸಚಿವ ಮಾಡ್ತೀವಿ ಎಂದು ಸಿಎಂ ಬೊಮ್ಮಾಯಿ ಹೇಳ್ತಾರೆ. ಆದ್ರೆ ಏಕೆ ಇನ್ನೂ ತಗೊಳ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇಡೀ ರಾಜ್ಯದಲ್ಲಿ ನಮ್ಮ ಕಾರ್ಯಕರ್ತರು, ಮಠಾಧೀಶರು ನನಗೆ ಫೋನ್ ಮಾಡಿ ನಿಮ್ಮನ್ನ ಏಕೆ ಸಚಿವ ಮಾಡ್ತಿಲ್ಲ ಎಂದು ಕೇಳುತ್ತಿದ್ದಾರೆ. ಇದನ್ನ ಸಿಎಂ ಮತ್ತು ಹೈಕಮಾಂಡ್​ಗೆ ಅರ್ಥ ಮಾಡಿಸಬೇಕು ಎನ್ನುವ ಒಂದೇ ಕಾರಣಕ್ಕೆ ನಾನು ಈ ರೀತಿಯ ಸೌಜನ್ಯ ಪ್ರತಿಭಟನೆ ಮಾಡುತ್ತಿದ್ದೇನೆ ಎಂದರು.

ಬಿಜೆಪಿಯಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆಯಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ನಿರ್ಲಕ್ಷ್ಯ ಪ್ರಶ್ನೆಯೇ ಬರುವುದಿಲ್ಲ. ನನಗೇನು ವಯಸ್ಸಾಗಿದೆಯಾ? ಇದನ್ನು ತೀರ್ಮಾನ ಮಾಡೋದು ಸಿಎಂ ಅಲ್ಲ, ಟಿಕೆಟ್ ಕೊಡುವಾಗ ಪಕ್ಷ ತೀರ್ಮಾನ ಮಾಡುವಂತದ್ದು. ಮೊನ್ನೆ ತನಕ ನಾನು ಸಂಪುಟದಲ್ಲಿ ಇದ್ದೆ. ನನ್ನ ಮೇಲೆ ಆರೋಪ ಕೇಳಿಬಂದ ಬಳಿಕ ರಾಜೀನಾಮೆ ಕೊಟ್ಟಿದ್ದೇನೆ. ಪ್ರಾರಂಭದಲ್ಲಿ ಬೇಡ ಅಂದ್ರು, ನಾನು ಅವರನ್ನು ಒಪ್ಪಿಸಿ ರಾಜೀನಾಮೆ ಕೊಟ್ಟಿದ್ದೆ ಎಂದು ತಿಳಿಸಿದರು.

ಇದನ್ನೂ ಓದಿ:ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ: ಅಧಿವೇಶನ ಆರಂಭಕ್ಕೂ ಮುನ್ನ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ

ಕೆ.ಜೆ.ಜಾರ್ಜ್ ಅವರು ಆರೋಪ ಹೊತ್ತಾಗ ರಾಜೀನಾಮೆ ಕೊಡಿ ಎಂದು ವಿಪಕ್ಷ ನಾಯಕನಾಗಿ ಒತ್ತಾಯಿಸಿದ್ದೆ. ಅವರು ರಾಜೀನಾಮೆ ಕೊಟ್ಟರು. ಕ್ಲೀನ್ ಚಿಟ್ ಬಂದ ತಕ್ಷಣ ಕಾಂಗ್ರೆಸ್​ನವರು ಅವರನ್ನ ಸಂಪುಟಕ್ಕೆ ಸೇರಿಸಿಕೊಂಡರು. ಈಗ ನನಗೆ ಕ್ಲೀನ್​ಚಿಟ್ ಸಿಕ್ಕಿದೆ. ಆದರೆ, ನಮ್ಮ ಸರ್ಕಾರದ ನಾಯಕ ಬೊಮ್ಮಾಯಿ ಅವರಿಗೆ ಏನು ತೊಂದ್ರೆ ಎಂಬುದು ನನಗೆ ಗೊತ್ತಿಲ್ಲ. ಯಾವುದೇ ವಿಚಾರದಲ್ಲಿ ಪಕ್ಷ ನನ್ನ ನಿರ್ಲಕ್ಷ್ಯ ಮಾಡಿಲ್ಲ. ಮೊನ್ನೆ ಪಕ್ಷದ ಕಚೇರಿ ಉದ್ಘಾಟನೆಗೆ ಬಾಗಲಕೋಟೆಗೆ ಕಳುಹಿಸಿದ್ದರು. ಕಲಬುರಗಿಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಕಳಿಸಿದ್ದರು, ನಿರ್ಲಕ್ಷ್ಯ ಮಾಡಿದ್ರೆ ನನ್ನನ್ನು ಏಕೆ ಕಳುಹಿಸುತ್ತಿದ್ದರು ಎಂದರು.

ಇದನ್ನೂ ಓದಿ:ಸಾವರ್ಕರ್ ಸೇರಿ ಮಹನೀಯರ ಫೋಟೋ ಅನಾವರಣ ಸ್ಪೀಕರ್​ಗೆ ಬಿಟ್ಟ ವಿಚಾರ: ಬೆಳಗಾವಿಯಲ್ಲಿ ಸಿಎಂ ಹೇಳಿಕೆ

ಈ ಹಿಂದೆ ಯಡಿಯೂರಪ್ಪ ಪಕ್ಷ ಕಟ್ತೀನಿ ಅಂತಾ ಹೊರಟಾಗ ಬೇಡ ತೊಂದರೆ ಆಗುತ್ತೆ ಅಂತ ಗಿಳಿಗೆ ಹೇಳಿದ ಹಾಗೆ ಹೇಳಿದ್ದೆ. ಆದ್ರೂ, ಪಕ್ಷ ಕಟ್ಟಿದ್ರು, ಎಷ್ಟು ಸೀಟ್ ತಗೊಂಡ್ರು?, ಬಿಜೆಪಿ ನಮ್ಮ ತಾಯಿ ಇದ್ದಂಗೆ, ಈ ತಾಯಿ ಬಿಟ್ಟು ಹೋಗೋಕೆ ನಾವ್ಯಾರು ತಯಾರಿಲ್ಲ. ಇದು ನಮಗೆ ಸಿಕ್ಕಿರುವಂತಹ ಸಂಸ್ಕಾರ ಎಂದು ಹೇಳಿದರು.

ABOUT THE AUTHOR

...view details