ಬಾಗಲಕೋಟೆ :ಸಾಮಾಜಿಕವಾಗಿ ನಾವು ಏನು ಮಾಡಬೇಕು, ನಮ್ಮ ವಿವೇಚನೆಯಲ್ಲಿ ಪರಿಸರ ಕಾಳಜಿ ಮುಖ್ಯವಾಗಬೇಕು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ವಿದ್ಯಾಗಿರಿಯ ಕೇಂದ್ರಿಯ ವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಇಲಾಖೆ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಮನೆ ಕಟ್ಟುವಾಗ ಗಾಳಿಗಾಗಿ ಹೇಗೆ ಕಿಟಕಿಗಳನ್ನು ಬಿಡುತ್ತೇವೋ, ಅದಕ್ಕೆ ಸರಿಸಮಾನವಾಗಿ ಮನೆಯ ಸುತ್ತಮುತ್ತ ಗಿಡಗಳನ್ನು ನೆಡಬೇಕು. ರಾಮನಗರ ಜಿಲ್ಲೆಯ ಬರಡು ಭೂಮಿಯಲ್ಲಿ ಬಯೋ ಫಾರೆಸ್ಟ್ ನಿರ್ಮಾಣ ಮಾಡಿ ಎರಡು ಎಕರೆ ಇದ್ದದ್ದು, ಈಗ 10 ಎಕರೆಗೆ ವಿಸ್ತರಿಸಲಾಗಿದೆ. ಜಿಲ್ಲೆಯ ನವನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿಯ ಪಕ್ಕದಲ್ಲಿ ಪೊಲೀಸ್ ಇಲಾಖೆ ಬಯೋ ಫಾರೆಸ್ಟ್ ನಿರ್ಮಿಸಿದ್ದಾರೆ. ಇದೇ ತರಹ ಇತರ ಕಡೆಯೂ ಬಯೋಫಾರೆಸ್ಟ್ ನಿರ್ಮಿಸಲು ಅರಣ್ಯ ಇಲಾಖೆ ಮುಂದಾಗಬೇಕು. ಅದಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.