ಬಾಗಲಕೋಟೆ: ರಾಜ್ಯದಲ್ಲಿ ಮುಂದಿನ ವರ್ಷ 500 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು. ಮುಧೋಳ ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿರುವ ಶಿವಲಿಂಗಪ್ಪ ಬಸಪ್ಪ ಹೊರಟ್ಟಿ ಪಬ್ಲಿಕ್ ಶಾಲೆಗೆ ಮಂಗಳವಾರ ಭೇಟಿ ನೀಡಿ ವೀಕ್ಷಣೆ ಮಾಡಿ ಶಾಲೆಯ ವತಿಯಿಂದ ಸನ್ಮಾನ ಸ್ಮೀಕರಿಸಿ ಮಾತನಾಡಿದರು.
ದೇಶದ ಆಸ್ತಿ ಮಕ್ಕಳ ಕಲಿಕೆಯಲ್ಲಿದ್ದು, ಮೊದಲ ಹಂತದಲ್ಲಿ 500 ಶಾಲೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅದಕ್ಕಾಗಿ ರಾಜ್ಯಕ್ಕೆ ಮಾದರಿಯಾಗಿರುವ ಯಡಹಳ್ಳಿಯ ಹೊರಟ್ಟಿ ಪಬ್ಲಿಕ್ ಶಾಲೆಗೆ ಭೇಟಿ ನೀಡಿದ್ದು, ಇಲ್ಲಿಯ ಸೌಲಭ್ಯಗಳನ್ನು ವೀಕ್ಷಣೆ ಮಾಡಲು ಆಗಮಿಸಿದ್ದೇನೆ ಎಂದರು. ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಎಲ್‍ಕೆಜಿಯಿಂದ ಹಿಡಿದು ಪಿಯುಸಿವರೆಗೆ ಸ್ಮಾರ್ಟ ಕ್ಲಾಸ್‍ನಿಂದ ಹಿಡಿದು ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗುತ್ತಿದೆ. ಖಾಸಗಿ ಶಾಲೆ ಮೀರಿಸುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ.
ಸುಸಜ್ಜಿತ ಪ್ರಯೋಗಾಲಯ, ಆಟವಾಡಲು ಮೈದಾನ ಸೇರಿದಂತೆ ಕಲಿಕೆಗೆ ಬೇಕಾಗುವ ಸೌಲಭ್ಯಗಳ ಒದಗಿಸಲಾಗುತ್ತಿದೆ. ಮೊದಲ ಹಂತದಲ್ಲಿ ರಾಜ್ಯದ 500 ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಮುಂದಿನ ಮೂರು ವರ್ಷಗಳ ನಂತರ 2 ಗ್ರಾಮ ಪಂಚಾಯತಿಗೆ ಒಂದರಂತೆ 3 ಸಾವಿರ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸುವ ಉದ್ದೇಶ ಸರಕಾರ ಹೊಂದಿದೆ ಎಂದರು.
ಹಿಂದಿನ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಸೇರಿದಂತೆ ಅನೇಕರು ಸರ್ಕಾರಿ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ. ದೇಶದ ಆಸ್ತಿ ಮಕ್ಕಳ ಕಲಿಕೆಯಲ್ಲಿ ಇದ್ದು, ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಎಲ್ಲ ಮಕ್ಕಳು ಶಾಲೆಗೆ ಬರಬೇಕು. ಮಕ್ಕಳು ಶಾಲೆಗೆ ಬರುವಂತಹ ವ್ಯವಸ್ಥೆ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ. ಪಬ್ಲಿಕ್ ಶಾಲೆ ಪರಿವರ್ತನೆಗೆ ಸಭಾಪತಿ ಹೊರಟ್ಟಿಯವರ ಮಾರ್ಗದರ್ಶನ ಅಗತ್ಯವಾಗಿದೆ. ಯಡಹಳ್ಳಿ ಮಾದರಿ ಶಾಲೆಗೆ ನನ್ನ ವ್ಯಯಕ್ತಿಕವಾಗಿ 5 ಲಕ್ಷ ರೂ.ಗಳನ್ನು ನೀಡುವುದಾಗಿ ತಿಳಿಸಿದರಲ್ಲದೇ ಇನ್ನೀತರ ಸಹಕಾರ ಸಹ ನೀಡಲಾಗುತ್ತಿದೆ ಎಂದು ಹೇಳಿದರು.