ಬಾಗಲಕೋಟೆ: ರಬಕವಿ ಬನಹಟ್ಟಿ ನಗರಸಭೆಗೆ ಸಂಬಂಧಿಸಿದ ಒಳಚರಂಡಿ ನೀರು ಶುದ್ಧೀಕರಣ ಘಟಕದ ಕಾಮಗಾರಿ ಬಹುತೇಕ ಮುಕ್ತಾಯ ಹಂತದಲ್ಲಿದ್ದು, ಮುಂದಿನ ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹೇಳಿದರು.
ಮದನಮಟ್ಟಿ ರಸ್ತೆಯಲ್ಲಿರುವ ಒಳಚರಂಡಿ ನೀರು ಶುದ್ಧೀಕರಣ ಘಟಕಕ್ಕೆ ನಿನ್ನೆ ಭೇಟಿ ನೀಡಿ, ಕಾಮಗಾರಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಗುಣಮಟ್ಟದ ಕಾಮಗಾರಿ ನಡೆಸುವಂತೆ ಮತ್ತೊಮ್ಮೆ ತಾಕೀತು ಮಾಡಲಾಗಿದೆ. ಸ್ವಲ್ಪ ವಿಳಂಬವಾದರೂ ಸಹಿತ ಮಹತ್ವದ ಯೋಜನೆಯಾಗಿರುವ ಈ ಕಾಮಗಾರಿ, ಹುಬ್ಬಳ್ಳಿ ನಂತರ ಉತ್ತರ ಕರ್ನಾಟಕದಲ್ಲಿ ಬಳಕೆಯಾಗುತ್ತಿರುವುದು ಬಾಗಲಕೋಟೆ ಜಿಲ್ಲೆಗೆ ಹೆಮ್ಮೆ ತರುವಂತಹದ್ದು. ಪಟ್ಟಣದ ಸೌಂದರ್ಯ ಹಾಗು ಅಭಿವೃದ್ಧಿಗೆ ಈ ಯೋಜನೆ ಸಹಾಯಕಾರಿಯಾಗಲಿದೆ. ಸದ್ಯ ರಬಕವಿ ಬನಹಟ್ಟಿ ನಗರಸಭೆ ವ್ಯಾಪ್ತಿಯ ಒಟ್ಟು 180 ಕಿ.ಮೀ ರಸ್ತೆಯಲ್ಲಿ 47 ಕಿ.ಮೀ ನಷ್ಟು ಪೈಪ್‍ಲೈನ್ ಅಳವಡಿಕೆ ಮಾಡಲಾಗಿದೆ. ಇದಕ್ಕೆ 42 ಕೋಟಿ ರೂ. ಖರ್ಚು ಮಾಡಲಾಗಿದೆ. ಮೊದಲ ಹಂತವಾಗಿ ಈ ಯೋಜನೆ ಜಾರಿಗೊಳ್ಳಲಿದ್ದು, ಹಂತ ಹಂತವಾಗಿ ಇಡೀ ನಗರಸಭೆ ವ್ಯಾಪ್ತಿಗೆ ವಿಸ್ತರಣೆಯಾಗಲಿದೆ ಎಂದರು.