ಬಾಗಲಕೋಟೆ: ಅಮಿತ್ ಶಾ ಹಿಂದಿ ಹೇರಿಕೆ ಬಗ್ಗೆ ಮಾತನಾಡಿರೋದು ವಿಷಾದಕರ. ಹಿಂದಿ ಹೇರಿಕೆಯನ್ನು ದಕ್ಷಿಣ, ಈಶಾನ್ಯ ಭಾರತದ ದೇಶಗಳು ಸಹಿಸೋದಿಲ್ಲ. ಒತ್ತಾಯಪೂರ್ವಕವಾಗಿ ಹೇರುವುದರಿಂದ ಹಿಂದಿ ಭಾಷೆಗೆ ಗೌರವ ಕಡಿಮೆಯಾಗುತ್ತದೆ, ಅಲ್ಲದೆ ಜನರಿಗೆ ಒತ್ತಾಯ ಮಾಡಿದಂತಾಗುತ್ತದೆ ಎಂದು ದಲಿತ ಮತ್ತು ಬಂಡಾಯ ಸಾಹಿತಿ ಡಾ. ಸಿದ್ಧಲಿಂಗಯ್ಯ ಕೇಂದ್ರ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಹಿಂದಿ ಭಾಷೆ ಹೇರಿಕೆ ವಿಚಾರ.. ಅಮಿತ್ ಶಾ ನಿಲುವಿಗೆ ಬಂಡಾಯ ಸಾಹಿತಿ ಡಾ. ಸಿದ್ಧಲಿಂಗಯ್ಯ ತೀವ್ರ ಖಂಡನೆ
ಅಮಿತ್ ಶಾ ಹಿಂದಿ ಹೇರಿಕೆಯನ್ನು ದಕ್ಷಿಣ, ಈಶಾನ್ಯ ಭಾರತದ ದೇಶಗಳು ಸಹಿಸೋದಿಲ್ಲ. ಒತ್ತಾಯಪೂರ್ವಕವಾಗಿ ಹೇರುವುದರಿಂದ ಹಿಂದಿ ಭಾಷೆಗೆ ಗೌರವ ಕಡಿಮೆಯಾಗುತ್ತದೆ ಎಂದು ಸಾಹಿತಿ ಡಾ. ಸಿದ್ಧಲಿಂಗಯ್ಯ ಹೇಳಿದರು.
ಜಿಲ್ಲೆಯ ಯಲ್ಲಟ್ಟಿಯಲ್ಲಿ ನಡೆದ ಕೊಣ್ಣೂರ ನುಡಿಸಡಗರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಕನ್ನಡವೇ ನಮ್ಮ ವೃತ್ತಿ ಸಾಧನ. ಕನ್ನಡಕ್ಕೆ ಕೊಟ್ಟಿರುವ ಸ್ಥಾನವನ್ನು ಯಾವ ಭಾಷೆ ಆಕ್ರಮಿಸಲು ಸಾಧ್ಯವಿಲ್ಲ. ಕೇಂದ್ರ ಗೃಹ ಸಚಿವರು ಹೇಳಿರೋದು ತುಂಬಾ ದು:ಖದಾಯಕ ಸಂಗತಿ. ಮಾಧ್ಯಮಗಳ ಮೂಲಕ ಅಮಿತ್ ಶಾ ತಮ್ಮ ಹೇಳಿಕೆಯಲ್ಲಿ ತಿದ್ದುಪಡಿ ಮಾಡಿಕೊಂಡಂತೆ ಕಾಣುತ್ತಿದೆ. ಇದು ಸ್ವಾಗತಾರ್ಹ. ರಾಜ್ಯ ಸರ್ಕಾರ ಆಂಗ್ಲ ಮಾಧ್ಯಮ ಶಾಲೆ ತೆರೆದಿರೋದು ಸರಿಯಲ್ಲ. ಇಂಗ್ಲೀಷ್‌ನ ಒಂದು ಭಾಷೆಯಾಗಿ ಸರ್ಕಾರ ಪೂರಕವಾಗಿ ಕಲಿಸುತ್ತಿಲ್ಲ. ಇಡೀ ಮಾಧ್ಯವನ್ನೇ ಇಂಗ್ಲೀಷ್‍ನಲ್ಲಿ ಮಾಡಿರೋದು ಕನ್ನಡಕ್ಕೆ ಕಂಟಕ ಎಂದರು.
1 ರಿಂದ 7 ನೇ ತರಗತಿವವರೆಗೆ ಮಾಧ್ಯಮ ಮಾತೃಭಾಷೆಯಲ್ಲಿಯೇ ಇರಲಿ. ಈ ಬಗ್ಗೆ ಸಿಎಂ ಶಿಕ್ಷಣ ಸಚಿವರಿಗೆ ಮನವಿ ಮಾಡುತ್ತೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಕನ್ನಡಾಭಿಮಾನಿಗಳು, ಕನ್ನಡಿಗರಿಗೆ ಮೆಚ್ಚುಗೆಯಾಗುವ ನಿರ್ಧಾರಗಳನ್ನು ಕೈಗೊಳ್ಳುವ ವಿಶ್ವಾಸ ನನಗಿದೆ ಎಂದರು.