ಬಾಗಲಕೋಟೆ:ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಾಯಕ್ಕ ಮೇಟಿ ಅವರು ಕುಡಿಯುವ ನೀರಿನ ಸಮಸ್ಯೆ ಕುರಿತು ಫೋನ್ ಇನ್ ಕಾರ್ಯಕ್ರಮವನ್ನು ತಮ್ಮ ಕಚೇರಿಯಲ್ಲಿ ನಡೆಸಿದರು.
ತಾಲೂಕ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕುಡಿಯುವ ನೀರಿನ ಸರಬರಾಜು ವಿಭಾಗದ ಇಂಜಿನಿಯರ್ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಪ್ರದೇಶಗಳಿಂದ ಹಲವು ಕರೆಗಳು ಬಂದವು. ಇದರಲ್ಲಿ ಬಹುತೇಕ ದೂರುಗಳು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸಂಬಂಧಿಸಿದ್ದವು. ಇದರ ಹೊರತಾಗಿ ಕೊಳವೆಬಾವಿ ಹಾಗೂ ಸ್ವಚ್ಛತೆ ಬಗ್ಗೆಯೂ ದೂರುಗಳು ಕೇಳಿ ಬಂದವು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಗೆಹರಿಯುವ ಸಮಸ್ಯೆಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು, ಕೆಳ ಹಂತದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೂಡಲಸಂಗಮದಲ್ಲಿ ನೀರಿನ ಟ್ಯಾಂಕ್ ಮೇಲಿನ ಮುಚ್ಚಳ ಹಾಗೂ ಸ್ವಚ್ಛತೆ ಸಂಬಂಧ ದೂರು ಬಂದಾಗ, ಹುನಗುಂದ ತಾಲೂಕಿನ ಎಇಓ ಸಂಬಂಧಪಟ್ಟ ಪಿಡಿಓ ಜೊತೆ ಮಾತನಾಡಿ, ಅರ್ಧ ಗಂಟೆಯಲ್ಲಿ ಸಮಸ್ಯೆ ಬಗೆಹರಿಸಿ ಫೋಟೋ ಕಳುಹಿಸಿರುವುದರ ಕುರಿತು ಜಿ.ಪಂ. ಅಧ್ಯಕ್ಷೆ ಮಾಹಿತಿ ನೀಡಿದರು.
ಕೆಲ ತಾಲೂಕಿನ ಎಇಓ ಹಾಗೂ ಇತರ ಅಧಿಕಾರಿಗಳು ಫೋನ್ ಇನ್ ಕಾರ್ಯಕ್ರಮಕ್ಕೆ ಯಾವುದೇ ಮಾಹಿತಿ ನೀಡದೆ ಗೈರಾಗಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಶೋಕಾಸ್ ನೋಟಿಸ್ ನೀಡಲು ಜಿ.ಪಂ ಸಿಇಓಗೆ ಪತ್ರದ ಮೂಲಕ ಸೂಚನೆ ನೀಡಿರುವುದಾಗಿ ತಿಳಿಸಿದರು.