ಬಾಗಲಕೋಟೆ :ಮಠಗಳಿಗೆ ಸರ್ಕಾರ ನೀಡುವ ಅನುದಾನದಲ್ಲಿ ಶೇ.30ರಷ್ಟು ಕಮಿಷನ್ ನೀಡಬೇಕಿದೆ. ಇಲ್ಲವಾದಲ್ಲಿ ಹಣವೇ ಬಿಡುಗಡೆ ಆಗಲ್ಲ. ಇಂದು ಭ್ರಷ್ಟಾಚಾರದ ಪರಿಸ್ಥಿತಿ ಇಲ್ಲಿಗೆ ಬಂದು ನಿಂತಿದೆ ಎಂದು ಶಿರಹಟ್ಟಿ ಶ್ರೀ ಫಕ್ಕಿರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ಬಾಗಲಕೋಟೆ ಜಿಲ್ಲೆಯ ಬಾಡಗಂಡಿಯಲ್ಲಿ ಗ್ರಾಮದಲ್ಲಿ ನಡೆದ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಮಠ-ಮಾನ್ಯಗಳು ಅನುದಾನ ಪಡೆಯೋಕೆ 30% ಕಮಿಷನ್ ಕೊಡಬೇಕು. ಅನುದಾನದಲ್ಲಿ ಅಧಿಕಾರಿಗಳು ಕಡಿತ ಮಾಡದೇ ಅನುದಾನ ನೀಡಲು ಸಾಧ್ಯವಿಲ್ಲ. ಕೇಂದ್ರ ಅಥವಾ ರಾಜ್ಯ ಸರ್ಕಾರ ಉತ್ತರ ಕರ್ನಾಟಕಕ್ಕೆ ಐಸ್ಕ್ರೀಂ ಬಿಡುಗಡೆಯಾದರೆ ಅದು ತಲುಪುವಾಗ ಕೇವಲ ಕಡ್ಡಿ ಉಳಿದಿರುತ್ತದೆ ಎಂದು ವ್ಯಂಗ್ಯವಾಡಿದರು.
ಮೊದಲೇ ರಾಜ್ಯ ಸರ್ಕಾರದ ವಿರುದ್ಧ ಪ್ರತಿಶತ 40ರಷ್ಟು ಕಮೀಷನ್ ನೀಡುವ ಬಗ್ಗೆ ಹಾಗೂ ಇತ್ತೀಚಿಗಷ್ಟೇ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಸೇರಿದಂತೆ, ಇತರ ವಿವಾದದ ಬಗ್ಗೆ ಚರ್ಚೆ ನಡೆಯುತ್ತಿರುವ ಸಮಯದಲ್ಲಿಯೇ ದಿಂಗಾಲೇಶ್ವರ ಸ್ವಾಮೀಜಿ ಇಂತಹ ಹೇಳಿಕೆ ನೀಡಿ ವಿವಾದದ ಬೆಂಕಿಗೆ ತುಪ್ಪ ಸುರಿದ್ದಾರೆ.
ಕೃಷ್ಣ, ಮಹಾದಾಯಿ ಹಾಗೂ ನವಲಿ ನೀರಾವರಿ ಯೋಜನೆ ಜಾರಿಗಾಗಿ ಮಾಜಿ ಸಚಿವ ಎಸ್.ಆರ್.ಪಾಟೀಲ ಅವರ ನೇತೃತ್ವದಲ್ಲಿ ಐದು ದಿನಗಳ ಕಾಲ ಸಂಕಲ್ಪ ಯಾತ್ರೆ ಕಳೆದ ದಿನ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ವಿವಿಧ ಸ್ವಾಮೀಜಿಗಳ ಸಾನಿಧ್ಯವಹಿಸಿದ್ದ ಈ ಸಮಾರಂಭದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಕಮಿಷನ್ ವಿಚಾರವಾಗಿ ಈ ಹೇಳಿಕೆ ನೀಡಿದರು.
ಇದನ್ನೂ ಓದಿ:ಈಶ್ವರಪ್ಪ ವಿರುದ್ಧ ಪ್ರತಿಭಟನೆ : ಸಿದ್ದು, ಡಿಕೆಶಿ, ಸುರ್ಜೇವಾಲಾ ಸೇರಿದಂತೆ 36 ಕಾಂಗ್ರೆಸ್ ನಾಯಕರ ಮೇಲೆ FIR