ಬಾಗಲಕೋಟೆ:ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದ ಹಿನ್ನೆಲೆ ಗರ್ಭಿಣಿ ಮೃತಪಟ್ಟ ಘಟನೆ ಜಮಖಂಡಿ ಪಟ್ಟಣದಲ್ಲಿ ನಡೆದಿದೆ.
ಕೊರೊನಾ ಭೀತಿಯಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಣೆ ಆರೋಪ: ಜಮಖಂಡಿಯಲ್ಲಿ ಗರ್ಭಿಣಿ ಸಾವು - ಜಮಖಂಡಿಯಲ್ಲಿ ಗರ್ಭಿಣಿ ಸಾವು
ಫೀಡ್ಸ್(ಮೂರ್ಛೆ ರೋಗ)ನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬಳಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕಿವೆ ಎಂಬ ಆರೋಪ ಕೇಳಿಬಂದಿದೆ. ಚಿಕಿತ್ಸೆ ಸಿಗದಿದ್ದಕ್ಕೆ ಗರ್ಭಿಣಿ ಸಾವನ್ನಪ್ಪಿದ್ದಾಳೆ.
ತಾಲೂಕಿನ ಕಡಪಟ್ಟಿ ಗ್ರಾಮದ ನಿವಾಸಿ ರೂಪಾ ಶಿವಾನಂದ ಹೊಸಮನಿ (23) ಮೃತ ಗರ್ಭಿಣಿ. ಫೀಡ್ಸ್(ಮೂರ್ಛೆ ರೋಗ)ದಿಂದ ಬಳಲುತ್ತಿದ್ದ ಗರ್ಭಿಣಿ ರೂಪಾಳನ್ನು ಸಂಬಂಧಿಕರು ಚಿಕಿತ್ಸೆಗೆಂದು ಪಟ್ಟಣದ ಹಲವು ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿದ್ದರು. ಆದರೆ, ಕೊರೊನಾ ವೈರಸ್ ಭೀತಿಯಿಂದ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದವು ಎನ್ನಲಾಗ್ತಿದೆ. ಕೊನೆಗೆ ತಾಲೂಕು ಆಸ್ಪತ್ರೆಗೆ ಕರೆತಂದು ಅರ್ಧ ಗಂಟೆ ಬಳಿಕ ಚಿಕಿತ್ಸೆ ನೀಡಲಾಯಿತು. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರಕ್ಕೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು. ಆದರೆ, ವಿಜಯಪುರಕ್ಕೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಜಮಖಂಡಿ ಹೊರವಲಯದಲ್ಲಿ ಮಹಿಳೆ ಮೃತಪಟ್ಟಿದ್ದಾಳೆ.
ಚಿಕಿತ್ಸೆ ನೀಡಲು ಹಿಂದೇಟು ಹಾಕಿದ ಖಾಸಗಿ ಆಸ್ಪತ್ರೆಗಳ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.