ಬಾಗಲಕೋಟೆ :ಕಾಂಗ್ರೆಸ್ ಪಕ್ಷದ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ್ದಂತಹ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ಬೆನ್ನಲೇ ಬಾಗಲಕೋಟೆ ಜಿಲ್ಲೆಯ ನೇಕಾರರು ಸಹ ಉಚಿತ ವಿದ್ಯುತ್ ಸೇರಿದಂತೆ ಇತರ ಶಾಶ್ವತ ಪರಿಹಾರ ನೀಡುವಂತೆ ಮನವಿ ಸರ್ಕಾರಕ್ಕೆ ಮಾಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ರಬಕವಿ - ಬನಹಟ್ಟಿ, ಮಹಾಲಿಂಗಪುರ, ಇಲಕಲ್ಲ, ಗುಳೇದಗುಡ್ಡ ಸೇರಿದಂತೆ ಇತರ ಪ್ರದೇಶದಲ್ಲಿ ನೇಕಾರರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಅವರಿಗೆ ಉದ್ಯೋಗ ಸೇರಿದಂತೆ ಇತರೆ ಹಲವು ಸಮಸ್ಯೆಗಳಿಂದ ತೊಂದರೆ ಉಂಟಾಗಿದೆ. ಆದ್ದರಿಂದ ಜಿಲ್ಲೆಯ ನೇಕಾರರಿಗೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘಟನೆ ರಾಜ್ಯಾಧ್ಯಕ್ಷರಾದ ಶಿವಲಿಂಗ ಟಿರಕಿ, ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ನೇಕಾರರಿಗೂ ಒದಗಿಸಬೇಕು. ರಾಷ್ಟ್ರೀಕೃತ ಬ್ಯಾಂಕುಗಳ ಮತ್ತು ಸಹಕಾರಿ ಸಂಘ ಸಂಸ್ಥೆಗಳ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಈಗಾಗಲೇ ಉಚಿತ ವಿದ್ಯುತ್ ಜಾರಿ ಮಾಡುವ ಬಗ್ಗೆ ಸರ್ಕಾರ ಗ್ಯಾರಂಟಿ ಯೋಜನೆಯಲ್ಲಿ ತಿಳಿಸಲಾಗಿದೆ. ಇದು ಫಾಮರ್ ಲೂಮ್ ನೇಕಾರರಿಗೆ ಅನ್ವಯ ಆಗುವಂತೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಅನೇಕ ಬಾರಿ ಭೇಟಿ ಮಾಡಿದಾಗ ಮುಂದೆ ನಮ್ಮದೇ ಸರ್ಕಾರ ಬರುತ್ತದೆ. ನಿಮ್ಮೆಲ್ಲ ಸಮಸ್ಯೆಗೆ ಪರಿಹಾರ ಒದಗಿಸಿ ಉಚಿತ ವಿದ್ಯುತ್ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ನೇಕಾರರ ಮುಖಂಡರಿಗೆ ಭರವಸೆ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಗಳಿಗೆ ಗಮನ ತರುವ ಉದ್ದೇಶ ಹೊಂದಿದ್ದೇವೆ.