ಬಾಗಲಕೋಟೆ:ಜಿಲ್ಲೆಯಲ್ಲಿ ಸಕಾಲದಡಿ ಫೆಬ್ರವರಿ ಮಾಹೆಯಲ್ಲಿ ಒಟ್ಟು 88279 ಸ್ವೀಕೃತಗೊಂಡ ಅರ್ಜಿಗಳ ಪೈಕಿ 71,872 ಕಡತಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಸಕಾಲ ಕಡತ ವಿಲೇವಾರಿ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 48 ಇಲಾಖೆಗಳಿಗೆ ಒಟ್ಟು 530 ಸೇವೆಗಳು ಸಕಾಲದಡಿ ಬರುತ್ತಿದ್ದು, ಪ್ರತಿಯೊಂದು ಅರ್ಜಿಗಳನ್ನು ಆನ್‍ಲೈನ್ ಮೂಲಕವೇ ಸ್ವೀಕರಿಸತಕ್ಕದ್ದು. ಮ್ಯಾನುವಲ್ ಮೂಲಕ ವಿಲೇವಾರಿ ಮಾಡತಕ್ಕದ್ದಲ್ಲವೆಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಸಕಾಲ ಅನುಷ್ಠಾನದಲ್ಲಿ ಬಾಗಲಕೋಟೆ ಜಿಲ್ಲೆ ರಾಜ್ಯದಲ್ಲಿ 16ನೇ ಸ್ಥಾನದಲ್ಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ವೀಕೃತಗೊಂಡ ಅರ್ಜಿಗಳ ತ್ವರಿತ ವಿಲೇವಾರಿಗೆ ಕ್ರಮವಹಿಸಲು ತಿಳಿಸಿದರು.
ಸಕಾಲ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪರಿಶೀಲನೆಗಾಗಿ ಜಿಲ್ಲಾ ಮಟ್ಟದಲ್ಲಿ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚಿಸಲಾಗಿದ್ದು, ಪರಿಶೀಲನಾ ತಂಡ ಪ್ರತಿ ಶನಿವಾರ ತಮ್ಮ ವ್ಯಾಪ್ತಿಯಲ್ಲಿ ಬರುವ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸತಕ್ಕದ್ದು. ಪರಿಶೀಲನೆ ಸಂದರ್ಭದಲ್ಲಿ ಅತಿ ಹೆಚ್ಚು ತಿರಸ್ಕೃತ ಪ್ರಮಾಣ, ವಿಳಂಬ ವಿಲೇವಾರಿ ಹಾಗೂ ಹೆಚ್ಚಿನ ಪ್ರಮಾಣದ ಶೂನ್ಯ ಸ್ವೀಕೃತಿ ಕಚೇರಿಗಳನ್ನು ಗಮನದಲ್ಲಿರಿಸಿಕೊಂಡು ತಪಾಸಣೆ ನಡೆಸುವಂತೆ ತಿಳಿಸಿದರು.
ಸಕಾಲ ಬಗ್ಗೆ ಮಾಹಿತಿ ಫಲಕ, ಪೋಸ್ಟರ್ಗಳು, ಕರಪತ್ರಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲಿ ಸಕಾಲ ಸೂಚನಾ ಫಲಕವನ್ನು ಹಾಕಬೇಕು. ಸಕಾಲದ ಬಗ್ಗೆ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.