ಬಾಗಲಕೋಟೆ: ಸೆ.7 ರಿಂದ 19 ವರೆಗೆ ಸಮುದಾಯ ಆಧಾರಿತ ಜಂತುಹುಳು ಮಾತ್ರೆಗಳನ್ನು ನುಂಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ರಾಷ್ಟ್ರೀಯ ಜಂತುಹುಳು ನಿವಾರಣಾ ಕುರಿತು ಜರುಗಿದ ವಿವಿಧ ಇಲಾಖೆ ಅಧಿಕಾರಿಗಳ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, 1 ವರ್ಷದಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳು ನಾಶಕ ಅಲ್ಬೆಂಡಾಜೋಲ್ ಮಾತ್ರೆಯನ್ನು ನೀಡಲಾಗುತ್ತಿದ್ದು, ಕೋವಿಡ್ ಭೀತಿಯ ಹಿನ್ನಲೆಯಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಮಕ್ಕಳಿಗೆ ಮಾತ್ರೆಗಳನ್ನು ನುಂಗಿಸಲಿದ್ದಾರೆ ಎಂದರು.
ಜಿಲ್ಲೆಯಲ್ಲಿನ ಅಂಗನವಾಡಿ, ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ಕಾಲೇಜ ಹಾಗೂ ಕೈಗಾರಿಕೆ ತರಬೇತಿ ಕೇಂದ್ರ, ಡಿಪ್ಲೋಮಾ, ನರ್ಸಿಂಗ್ ಕಾಲೇಜಿನಲ್ಲಿರುವ 1 ರಿಂದ 19 ವರ್ಷದೊಳಗಿನ ಒಟ್ಟು 7.05 ಲಕ್ಷ ಮಕ್ಕಳಿರಬಹುದೆಂದು ಅಂದಾಜಿಸಲಾಗಿದ್ದು, ಈ ಎಲ್ಲಾ ಮಕ್ಕಳಿಗೆ ಜಂತುಹುಳು ನಾಶಕ ನುಂಗಿಸಬೇಕಾಗಿದ್ದು, ಈ ಕಾರ್ಯಕ್ಕೆ ಜಿಲ್ಲೆಯಲ್ಲಿರುವ 1400 ಆಶಾ ಕಾರ್ಯಕರ್ತೆ ಹಾಗೂ 2200 ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರತಿ ಆಶಾ ಅಥವಾ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ದಿನಕ್ಕೆ 15 ಮನೆಗಳಿಗೆ ತೆರಳಿ ಮನೆಯಲ್ಲಿರುವ ಮಕ್ಕಳನ್ನು ಹೊರಗಡೆ ಕರೆದು ಮಾತ್ರೆಗಳನ್ನು ನುಂಗಿಸಲಿದ್ದಾರೆಂದು ತಿಳಿಸಿದರು.