ಬಾಗಲಕೋಟೆ: ಸಾಮಾನ್ಯವಾಗಿ ಭಕ್ತರು ದೇವರಿಗೆ ಹೂ, ಹಣ್ಣು, ಸೀರೆ, ನೈವೇದ್ಯವನ್ನು ಸಮರ್ಪಿಸ್ತಾರೆ. ಆದ್ರೆ ಇಲ್ಲೊಂದು ಕಡೆ ಪೂಜಾರಿಗಳೇ ತಮ್ಮ ತಲೆಗೆ ತೆಂಗಿನ ಕಾಯಿಗಳನ್ನು ಒಡೆದುಕೊಳ್ಳುವ ಮೂಲಕ ಭಕ್ತಿಯನ್ನು ಸಮರ್ಪಿಸಲಾಗುತ್ತದೆ. ಹೌದು, ಇಂತಹ ಭಯಾನಕ ದೃಶ್ಯ ಕಂಡು ಬಂದದ್ದು ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಲ್ಲಿನ ದಂಡಿನ ದುರ್ಗಾ ದೇವಿ ಜಾತ್ರೆಯಲ್ಲಿ. ಕಳೆದ 28 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ಜಾತ್ರೆಯಲ್ಲಿ ಎಲ್ಲರ ಗಮನ ಸೆಳೆಯುವುದು ಪೂಜಾರಿಗಳು ತಲೆಗೆ ತೆಂಗಿನಕಾಯಿ ಒಡೆದುಕೊಂಡು ದೇವರಿಗೆ ಭಕ್ತಿ ಸಮರ್ಪಿಸುವ ದೃಶ್ಯ.
ಈ ಬಾರಿಯೂ ಕೂಡ ದಂಡಿನ ದುರ್ಗಾದೇವಿ ದೇವಸ್ಥಾನದ ಪೂಜಾರಿಗಳಾದ ದಲ್ಲಪ್ಪ ಹಾಗೂ ನಾಗಪ್ಪ ಒಟ್ಟು 30ಕ್ಕೂ ಅಧಿಕ ತೆಂಗಿನಕಾಯಿಗಳನ್ನು ತಲೆಗೆ ಒಡೆದುಕೊಂಡು ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ. ಪ್ರತಿ ವರ್ಷ ಪೂಜಾರಿಗಳು ತಲೆಗೆ ತೆಂಗಿನಕಾಯಿಗಳನ್ನು ಒಡೆದುಕೊಳ್ಳುವುದನ್ನು ನೋಡಲು ಜಿಲ್ಲೆ, ರಾಜ್ಯ, ಹೊರ ರಾಜ್ಯಗಳಿಂದ ಭಕ್ತರು ಆಗಮಿಸ್ತಾರೆ. ಹರಿಣಿಶಿಕಾರಿ ಸಮಾಜದ ಬಾಂಧವರ ಆರಾಧ್ಯ ದೈವವಾಗಿರುವ ದಂಡಿನ ದುರ್ಗಾ ದೇವಿ ಜಾತ್ರೆಯಲ್ಲಿ ಭಾಗಿಯಾಗಿ ಹರಕೆ ಹೊತ್ತರೆ ಬೇಡಿಕೆಗಳು ಈಡೇರುತ್ತವೆ ಎನ್ನುವ ನಂಬಿಕೆಯಿದೆ. ಹೀಗಾಗಿ ಜಾತ್ರೆಯ ಸಂದರ್ಭದಲ್ಲಿ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.