ಬಾಗಲಕೋಟೆ: ಘಟಪ್ರಭಾ ಹಿನ್ನೀರು ಸಂಗ್ರಹವಾಗಿರುವ ಬೀಳಗಿ ತಾಲೂಕಿನ ಅನಗವಾಡಿ ಸೇತುವೆ ಮೇಲೆ ಬೃಹದಾಕಾರದ ಮೊಸಳೆ ಕಂಡು ಬಂದು ಕೆಲ ಸಮಯ ಆತಂಕ ಮೂಡಿಸಿರುವ ಘಟನೆ ನಡೆದಿದೆ.
ಹುಬ್ಬಳ್ಳಿ ಸೋಲ್ಹಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ 3 ನಿಮಿಷಗಳ ಕಾಲ ಇದ್ದ ಬೃಹತ್ ಮೊಸಳೆ ನೋಡಿ, ಪ್ರಯಾಣಿಕರು ಹಾಗೂ ಸ್ಥಳೀಯ ಜನತೆ ಗಾಬರಿಯಾಗಿದ್ದಾರೆ. ಇದರಿಂದ ಕೆಲ ಸಮಯ ರಸ್ತೆ ಸಂಚಾರ ಸಹ ವಿಳಂಬವಾಗಿ ಪ್ರಯಾಣಿಕರು ಪರದಾಡುವಂತಾಗಿತ್ತು. ಆಲಮಟ್ಟಿ ಹಿನ್ನೀರಿನಲ್ಲಿ ಮೊಸಳೆಗಳು ಸಾಕಷ್ಟಿವೆ ಎಂದು ಹೇಳಲಾಗುತ್ತಿದೆ.
ಬೀಳಗಿ ತಾಲೂಕಿನ ಅನಗವಾಡಿ ಸೇತುವೆ ಬಳಿ ಮೊಸಳೆ ಪತ್ತೆ ಇತ್ತೀಚೆಗೆ ಇದೇ ಅನಗವಾಡಿ ಸೇತುವೆ ಬಳಿ ಮೊಸಳೆಗೆ ಇಬ್ಬರು ಬಲಿಯಾಗಿದ್ದರು. ಇದೀಗ ಮತ್ತೆ ಮೊಸಳೆ ಪ್ರತ್ಯಕ್ಷವಾಗಿದೆ. ಹಿನ್ನೀರಿನಲ್ಲಿರುತ್ತಿದ್ದ ಮೊಸಳೆಯು ಈಗ ರಸ್ತೆಯ ಮೇಲೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ರಾತ್ರಿ ಸಮಯದಲ್ಲಿ ಮೊಸಳೆ ರಸ್ತೆ ಮೇಲೆ ಬಂದಿರುವುದನ್ನು ಗಮನಿಸಿದ ಆನಂದ ಪಾತ್ರೋಟ ಎಂಬುವ ಯುವಕ ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದ್ದಾನೆ. ಪ್ರಯಾಣಿಕರು ತಮ್ಮ ವಾಹನದ ಲೈಟ್ ಬಿಟ್ಟು ಮೊಸಳೆಯನ್ನು ನೋಡಲು ಮುಗಿ ಬಿದ್ದಿದ್ದರು. ಜನರ ಗಲಾಟೆ ಕೇಳಿ ಮೊಸಳೆ ಮತ್ತೆ ನದಿಗೆ ಹೋಗಿದೆ. ಇದರಿಂದ ಆತಂಕ ದೂರುವಾಗಿ ಪ್ರಯಾಣಿಕರು ಸಂಚಾರ ಮುಂದುವರಿಸಿದ್ದಾರೆ.
ಇದನ್ನೂ ಓದಿ:ನವರಾತ್ರಿ ಬಂತೆಂದರೆ ಇವರು ಪ್ರೇತ.. ಹರಕೆ ತೀರಿಸಲು ಪುತ್ತೂರು ಆಟೋ ಚಾಲಕನ ವಿಚಿತ್ರ ವೇಷ
ಇನ್ನೂ ಮೊಸಳೆ ಪಾರ್ಕ್ ಮಾಡುವ ಬಗ್ಗೆ ಚರ್ಚೆ ಸಹ ನಡೆದಿತ್ತು. ಆದರೆ, ಅದು ಹಾಗೆ ನನೆಗುದಿಗೆ ಬಿದ್ದಿದೆ. ಘಟಪ್ರಭಾ ನದಿಯ ಸೇತುವೆ ಮೇಲೆ ಮೊಸಳೆ ಬಂದಿರುವುದು ಭೀತಿಗೆ ಕಾರಣವಾಗಿದ್ದು, ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.