ಬಾಗಲಕೋಟೆ:ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಮಾಜಿ ಶಾಸಕ, ಕಾಂಗ್ರೆಸ್ ಪಕ್ಷದ ಮುಖಂಡ ವಿಜಯಾನಂದ ಕಾಶಪ್ಪನವರ ವಿರುದ್ದ ಹನಗುಂದ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಡಿಸಿಸಿ ಬ್ಯಾಂಕ್ ಪಿಗ್ಮಿ ಎಜೆಂಟ್ ಅನುಮಾನಾಸ್ಪದ ಸಾವು ಪ್ರಕರಣ ಹಿನ್ನಲೆ, ವಿಚಾರಣೆಗೆ ಹಾಜರಾಗಲು ಬೆಂಬಲಿಗರಿಗೆ ನೋಟಿಸ್ ನೀಡಿದ್ದಕ್ಕೆ ಮಾಜಿ ಶಾಸಕರು ಗರಂ ಆಗಿದ್ದರು. ಜೊತೆಗೆ ಪೊಲೀಸ್ ಠಾಣೆಗೆ ನುಗ್ಗಿ ಸಿಪಿಐ ಜೊತೆ ವಾಗ್ವಾದ ಮಾಡಿದ್ದ ಆರೋಪವನ್ನೂ ಅವರು ಎದುರಿಸುತ್ತಿದ್ದಾರೆ. ಇದರ ಜೊತೆಗೆ, ಸಿಪಿಐಗೆ ಮನಬಂದಂತೆ ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎಂಬ ಕಾರಣದಿಂದ ಪೊಲೀಸರು ಐಪಿಸಿ ಕಲಂ 143, 147, 353, 504 ಹಾಗು 506 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಘಟನೆಯ ವಿವರ:ಇಳಕಲ್ ನಾಗೂರು ರಸ್ತೆ ಬಳಿ ಡಿಸಿಸಿ ಬ್ಯಾಂಕ್ ಪಿಗ್ಮಿ ಎಜೆಂಟ್ ಬಸವರಾಜ ಎಂಬುವವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಪ್ರಕರಣ ಸಂಬಂಧ, ಅಕ್ಟೋಬರ್ 27 ರಂದು ತಲೆಗೆ ಏಟು ಬಿದ್ದ ಶವ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಾಶಪ್ಪನವರ ಬೆಂಬಲಿಗರಾದ ಮಂಜುನಾಥ ಗೊಂದಿ ಇಳಕಲ್, ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಬಿ.ಎಸ್.ಪಾಟೀಲ ಹಾಗೂ ಇತರರ ಮೇಲೆ ಕೇಸ್ ದಾಖಲಾಗಿತ್ತು. ಇವರನ್ನು ಬಂಧಿಸುವ ಮುನ್ನವೇ 11 ಜನ ಆರೋಪಿಗಳು ನಿರೀಕ್ಷಣಾ ಜಾಮೀನು ಪಡೆದಿದ್ದರು.
ಈ ಬಗ್ಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಪ್ರತಿಕ್ರಿಯೆ ನೀಡಿ, ವಿನಾಕಾರಣ ಪ್ರಕರಣದಲ್ಲಿ ನನ್ನ ಆರೋಪಿ ಮಾಡಲು ಪ್ರಯತ್ನಗಳು ನಡೆದಿವೆ. ಈಗ ಗ್ರಾ.ಪಂ ಚುನಾವಣೆಯಲ್ಲಿ ನಾನು ಪ್ರಚಾರಕ್ಕೆ ಹೋಗಬಾರದು ಅಂತ ಶಾಸಕ ದೊಡ್ಡನಗೌಡ ಪಾಟೀಲ ಈ ರೀತಿ ಕೇಸ್ ಹಾಕಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲೋಕೇಶ್ ಜಗಲಾಸರ್ ಪ್ರತಿಕ್ರಿಯೆ ನೀಡಿ, ಠಾಣೆಗೆ ನುಗ್ಗಿ ಸಿಪಿಐ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು ಎಂದರು.