ಬಾಗಲಕೋಟೆ:ಜನತಾ ಕರ್ಫ್ಯೂ ಕಾರಣ ರಾಜ್ಯದಲ್ಲಿ ಬಟ್ಟೆ ಮಾರಾಟದ ಅಂಗಡಿಗಳು ಬಂದ್ ಆಗಿದ್ದು, ಇದರ ನೇರ ಪರಿಣಾಮ ನೇಕಾರರ ಮೇಲೆ ಬೀರಿದೆ. ಸದ್ಯ, ಕೆಲಸ ಇದ್ದರೂ ವ್ಯಾಪಾರ ವಹಿವಾಟಿಲ್ಲದೆ ನೇಕಾರಿಕೆ ಮಾಡುವವರು ಸಂಕಷ್ಟದಲ್ಲಿದ್ದಾರೆ.
ಜಿಲ್ಲೆಯಲ್ಲಿ ರಬಕವಿ-ಬನ್ನಹಟ್ಟಿ, ಇಲಕಲ್, ಗುಳೇದಗುಡ್ಡ, ಕಮತಗಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನೇಕಾರಿಕೆ ವೃತ್ತಿಯನ್ನೇ ಅವಲಂಭಿಸಿರುವ ನೂರಾರು ಕುಟುಂಬಗಳಿವೆ. ಈ ಕುಟುಂಬಗಳು ರಬಕವಿ-ಬನ್ನಹಟ್ಟಿ ಕಾಟನ್ ಸೀರೆ, ಇಲಕಲ್ ಸೀರೆ, ರೇಶ್ಮೆ ಸೀರೆ, ಗುಳೇದಗುಡ್ಡ ಪಟ್ಟಣದ ಕುಪ್ಪಸ್ ಹೀಗೆ ವಿವಿಧ ಬಗೆಯ ವಸ್ತ್ರಗಳನ್ನು ಕೈಮಗ್ಗ ಹಾಗೂ ವಿದ್ಯುತ್ ಮಗ್ಗಗಳಿಂದ ತಯಾರಿಸುತ್ತವೆ.
ಸದ್ಯ, ಕೋವಿಡ್ ಉಲ್ಬಣಗೊಂಡಿರುವ ಕಾರಣಕ್ಕೆ ರಾಜ್ಯದಲ್ಲಿ ಸರ್ಕಾರ ಕಠಿಣ ಕರ್ಫ್ಯೂ ಜಾರಿಗೊಳಿಸಿದೆ. ಇದರಿಂದ ನೇಕಾರ ಉದ್ಯೋಗಕ್ಕೆ ಯಾವುದೇ ಸಮಸ್ಯೆ ಆಗಿಲ್ಲ. ಆದರೆ, ಬಟ್ಟೆ ಅಂಗಡಿಗಳು ಬಂದ್ ಆಗಿರುವ ಕಾರಣ ವ್ಯಾಪಾರ ಇಲ್ಲದೆ, ನೇಯ್ದಿರುವ ಬಟ್ಟೆಗಳು ಮಾರುಕಟ್ಟೆಗೆ ಹೋಗುತ್ತಿಲ್ಲ. ಇದು ನೇಕಾರರರಿಗೆ ಸಂಕಷ್ಟ ತಂದೊಡ್ಡಿದ್ದು, ಕೆಲಸ ಇದ್ದರೂ ಜೀವನ ನಡೆಸಲು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.