ಬಾಗಲಕೋಟೆ:ನಗರದ ಸ್ವಕುಳಸಾಳಿ ನೇಕಾರ ಸಮಾಜದ ಗೌರವಾಧ್ಯಕ್ಷರಾಗಿದ್ದ ಶಿವಾನಂದ ಏಕಬೋಟೆ ಹಾಗೂ ಅವರ ಪತ್ನಿ ಸುಮಿತ್ರಾಬಾಯಿ ಶಿವಾನಂದ ಏಕಬೋಟೆ ದಂಪತಿ ಒಂದೇ ವಾರದಲ್ಲಿ ಕೋವಿಡ್ ಸೋಂಕು ತಗುಲಿ ಪ್ರಾಣ ಕಳೆದುಕೊಂಡಿದ್ದಾರೆ.
ಈ ದಂಪತಿ ಕಳೆದ ತಿಂಗಳು ಬೆಂಗಳೂರಿನಲ್ಲಿ ವಾಸವಿರುವ ಪುತ್ರನ ಬಳಿ ತೆರಳಿದ್ದರು. ಈ ವೇಳೆ ಕೊರೊನಾ 2 ನೇ ಅಲೆ ಕುಟುಂಬದ ಸದಸ್ಯರೆಲ್ಲರಿಗೂ ಬಾಧಿಸಿದೆ. ಆಸ್ಪತ್ರೆಗೆ ದಂಪತಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೂ ಪ್ರಯೋಜನವಾಗಲಿಲ್ಲ. ಪರಿಣಾಮ, ಮಾರಕ ರೋಗದ ಜೊತೆ ಹೋರಾಟ ನಡೆಸಲಾಗದೆ ಒಂದೇ ವಾರದಲ್ಲಿ ಎರಡು ಜೀವಗಳು ಬಾರದ ಲೋಕಕ್ಕೆ ಪಯಣಿಸಿವೆ.
ಬಾಗಲಕೋಟೆಯಲ್ಲಿ 153 ಪ್ರಕರಣ ಪತ್ತೆ
ಜಿಲ್ಲೆಯಲ್ಲಿ ಹೊಸದಾಗಿ 153 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇಬ್ಬರು ಮೃತಪಟ್ಟಿದ್ದಾರೆ. 29 ಜನ ಕೋವಿಡ್ನಿಂದ ಗುಣಮುಖರಾಗಿ ನಿಗದಿತ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 14,998 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ 14,274 ಜನ ಕೋವಿಡ್ನಿಂದ ಗುಣಮುಖರಾಗಿದ್ದಾರೆ.