ಬಾಗಲಕೋಟೆ: ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣದ ಹಂತಕ್ಕೆ ತಲುಪುತ್ತಿರುವುದಾಗಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣ ಹಂತ ತಲುಪಿದೆ : ಗೋವಿಂದ ಕಾರಜೋಳ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಜರುಗಿದ ಅಧಿಕಾರಿಗಳ ಜೊತೆಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾರ್ಚ್ 24 ರಿಂದ ಮೇ 3 ವರೆಗೆ ಒಟ್ಟು 40 ದಿನಗಳ ಲಾಕ್‍ಡೌನ್‍ನಿಂದಾಗಿ ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯವಾಯಿತು. ಶನಿವಾರ ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ ಎಂದರು.
ಇನ್ನು, ಮಂಗಳೂರು ಮತ್ತು ಉಡುಪಿ ಜಿಲ್ಲೆಯಿಂದ 63 ಬಸ್‍ಗಳ ಮೂಲಕ ಜಿಲ್ಲೆಯ ಒಟ್ಟು 1,761 ಕಾರ್ಮಿಕರು ಬಂದಿದ್ದು, ಅವರೆಲ್ಲರನ್ನೂ ಹೋಂ ಕ್ವಾರಂಟೈನ್ ಮಾಡುವ ಮೂಲಕ ನಿಗಾ ವಹಿಸಬೇಕು. ಬಾದಾಮಿ ಮತ್ತು ಹುನಗುಂದಕ್ಕೆ ಇನ್ನೂ ಹೆಚ್ಚು ಜನ ಕಾರ್ಮಿಕರು ಬರಲಿದ್ದಾರೆ. ಅಲ್ಲದೆ, ರಾಜಸ್ಥಾನದಿಂದ 14 ಜನ ವಿದ್ಯಾರ್ಥಿಗಳು ಶನಿವಾರ ಜಿಲ್ಲೆಗೆ ಆಗಮಿಸಲಿದ್ದಾರೆ. ಹೊರ ರಾಜ್ಯದಿಂದ ಬಂದವರನ್ನ ಇನ್ಸಿಟ್ಯೂಟ್‍ನಲ್ಲಿ ಕ್ವಾರಂಟೈನ್ ಮಾಡಿ, ದಿನನಿತ್ಯ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಚೆಕ್ಪೊಸ್ಟ್ಗಳನ್ನ ಬಿಗಿಗೊಳಿಸಿ, ಕಾರ್ಯಪಡೆ ಚುರುಕುಗೊಳಿಸಲು ತಿಳಿಸಿದರು.
ಜಿಲ್ಲೆಯ ಹಡಪದ ಅಪ್ಪನ್ನ ಜನಾಂಗದವರಿಗೆ ಈಗಾಗಲೇ 1,980 ವಿಶೇಷ ಕಿಟ್ ವಿತರಿಸಲಾಗಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಏಪ್ರಿಲ್ ಮತ್ತು ಮೇ ಎರಡು ತಿಂಗಳ ಆಹಾರ ಧಾನ್ಯವನ್ನು ನೀಡಲಾಗುತ್ತಿದೆ. ಬಡ ಎಸ್ಸಿ,ಎಸ್‍ಟಿ ಜನಾಂಗದವರಿಗೆ ತರಕಾರಿ ಖರೀದಿಗೆ ಒತ್ತುಗಾಡಿಗಾಗಿ 50 ಸಾವಿರ ಬಂಡವಾಳ ನೀಡಲಾಗುತ್ತಿದ್ದು,ಹೆಣ್ಣು ಮಕ್ಕಳಿಗೆ ಆದ್ಯತೆ ನೀಡಲಾಗುತ್ತಿದೆ. ಕೃಷಿ ಚಟುವಟಿಕೆಗಳಿಗೆ ಬೀಜ ಮತ್ತು ಗೊಬ್ಬರಗಳ ಕೊರತೆ ಇರುವುದಿಲ್ಲ ಎಂದರು.