ಬಾಗಲಕೋಟೆ:ಕೋಳಿ ತಿಂದ್ರೆ ಕೊರೊನಾ ವೈರಸ್ ಬರುತ್ತೆ ಎಂಬ ವದಂತಿಗೆ ಕಿವಿ ಕೊಟ್ಟು ಕೋಳಿ ಫಾರಂ ಮಾಲೀಕರು ಕೋಳಿಗಳನ್ನು ಜೀವಂತವಾಗಿ ಗುಂಡಿ ತೆಗೆದು ಮಣ್ಣು ಮಾಡುತ್ತಿದ್ದಾರೆ. ಇನ್ನೊಂದೆಡೆ ಕೋಳಿಗಳನ್ನು ಖರೀದಿಸುವ ಗ್ರಾಹಕರಿಲ್ಲದೆ ಕುಕ್ಕುಟೋದ್ಯಮ ಸಂಪೂರ್ಣ ನಲುಗಿ ಹೋಗುತ್ತಿದೆ. ಜಿಲ್ಲೆಯ ಜಮಖಂಡಿ ತಾಲ್ಲೂಕಿನ ವಿವಿಧೆಡೆ ಲಕ್ಷಕ್ಕೂ ಅಧಿಕ ಕೋಳಿಗಳ ಮಾರಣ ಹೋಮ ನಡೆದಿದೆ ಎನ್ನಲಾಗುತ್ತಿದೆ.
ಕೋಳಿಗಳಿಂದ ಕೊರೊನಾ ಹಬ್ಬುವ ಆತಂಕ; ಕುಕ್ಕುಟಗಳ ಜೀವಂತ ಸಮಾಧಿ, ನಷ್ಟದಲ್ಲಿ ಉದ್ಯಮ - ಕೋಳಿ ಉದ್ಯಮ ಸಂಪೂರ್ಣ ನಷ್ಟ
ಕೊರೊನಾದಿಂದಾಗಿ ಕೋಳಿ ಉದ್ಯಮ ಭಾರಿ ನಷ್ಟ ಅನುಭವಿಸುತ್ತಿದೆ. 3 ರೂ.ಗೆ ಕೆ.ಜಿ ಕೋಳಿ ಮಾಂಸ ಕೊಟ್ಟರೂ ಕೊಂಡುಕೊಳ್ಳುವ ಗ್ರಾಹಕನಿಲ್ಲ! ಒಂದೆಡೆ ಕೋಳಿಯಿಂದ ಕೊರೊನಾ ಹಬ್ಬುವ ಭೀತಿ, ಮತ್ತೊಂದೆಡೆ ನಷ್ಟದಲ್ಲಿರುವ ಕುಕ್ಕುಟೋದ್ಯಮ. ಕೋಳಿ ಫಾರಂ ಮಾಲೀಕರು ಈ ಬೆಳವಣಿಗೆಗಳಿಂದ ಬೇಸತ್ತು ಜೀವಂತ ಕೋಳಿಗಳ ಮಾರಣ ಹೋಮ ಮಾಡುತ್ತಿದ್ದಾರೆ.

ಮಾರಣ ಹೋಮ
ಕೊರೊನಾದಿಂದಾಗಿ ಯಾರೂ ಕೂಡ ಕೋಳಿ ಮಾಂಸವನ್ನು ಖರೀದಿಸುತ್ತಿಲ್ಲ. ಇದರಿಂದ ಫಾರ್ಮ್ ಮಾಲೀಕರು ನಷ್ಟದಿಂದ ತತ್ತರಿಸಿ ಹೋಗಿದ್ದಾರೆ. ಜೊತೆಗೆ ಮಾರಾಟವಾಗದೆ ಕೋಳಿ ಸಾಕಾಣಿಕೆ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಮಾಲೀಕರು. ಮೂರು ರೂಪಾಯಿಗೆ ಕೆ.ಜಿ. ಕೋಳಿ ಮಾಂಸ ಕೊಟ್ಟರೂ ಕೂಡ ಯಾರೂ ಖರೀದಿಗೆ ಮನಸ್ಸು ಮಾಡುತ್ತಿಲ್ಲ. ಇದರಿಂದ ಕಂಗಾಲಾದ ಕೋಳಿ ಫಾರಂ ಮಾಲೀಕರು ಕೋಳಿಗಳನ್ನು ಜೀವಂತವಾಗಿ ಗುಂಡಿ ತೋಡಿ ಮುಚ್ಚಿ ಸಾಯಿಸುತ್ತಿದ್ದಾರೆ.
ಜಮಖಂಡಿ ತಾಲೂಕಿನ ಹೊರವಲಯದಲ್ಲಿ ಕೋಳಿಗಳನ್ನು ಜೆಸಿಬಿ ಮೂಲಕ ಜೀವಂತ ಸಮಾಧಿ ಮಾಡುತ್ತಿರುವುದು.