ಬಾಗಲಕೋಟೆ:ಕೊರೊನಾ ಎರಡನೇ ಅಲೆಯಿಂದ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇನ್ಮುಂದೆ ವಿವಾಹ ಸಮಾರಂಭಗಳಿಗೆ ಅನುಮತಿ ಇಲ್ಲ. ಮದುವೆಯಿಂದಲೇ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲೆಯಲ್ಲಿ ಈಗಾಗಲೇ 956 ಮದುವೆಗೆ ಅನುಮತಿ ಪಡೆಯಲಾಗಿದೆ. ಇವನ್ನು ಹೊರತುಪಡಿಸಿ ಇನ್ಮುಂದೆ ಯಾವುದೇ ವಿವಾಹಗಳಿಗೆ ಅನುಮತಿ ಇರುವುದಿಲ್ಲ ಎಂದರು.
ಜಿಲ್ಲೆಗೆ ಈಗಾಗಲೇ 15 KL ಆಕ್ಸಿಜನ್ ಬಂದಿದ್ದು, ಹೆಚ್ಚುವರಿಯಾಗಿ ಇನ್ನೂ 15 KL ಆಕ್ಸಿಜನ್ ಬರಲಿದೆ. ಜಿಲ್ಲೆಯ ಸಿಮೆಂಟ್ ಕಾರ್ಖಾನೆಗಳ ಆಡಳಿತ ಮಂಡಳಿಯವರು ಆಕ್ಸಿಜನ್ ಸಿಲಿಂಡರ್ಗಳನ್ನು ನೀಡುತ್ತಿದ್ದಾರೆ. ಅಲ್ಲದೇ ಎಂ.ಎಸ್.ಪಿ.ಎಲ್ ಅವರಿಂದ ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆ ಸೇರಿ ಒಟ್ಟು 80 ಜಂಬೂ ಸಿಲಿಂಡರ್ಗಳನ್ನು ಪ್ರತಿದಿನ ನೀಡಲು ಒಪ್ಪಿರುವುದಾಗಿ ಕಾರಜೋಳ ತಿಳಿಸಿದ್ದಾರೆ.