ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳದಲ್ಲಿ ಯೂನಿಯನ್ ಬ್ಯಾಂಕ್ ಎಟಿಎಂ ದರೋಡೆಗೆ ಕ್ಯಾಶಿಯರ್​ರಿಂದಲೇ​ ನೆರವು.. ಪ್ರಕರಣ ಭೇದಿಸಿದ ಪೊಲೀಸರು - Cops cracking Union Bank ATM robbery

ಎಟಿಎಂ ಲೂಟಿ ಪ್ರಕರಣ ತನಿಖೆಯ ವೇಳೆ ಬ್ಯಾಂಕ್​ ಸಿಬ್ಬಂದಿಯನ್ನು ವಿಚಾರಣೆ ನಡೆಸಿದಾಗ ಬ್ಯಾಂಕ್​ನ ಕ್ಯಾಶಿಯರ್​ ಆಗಿದ್ದ ಮಿಶ್ಮಿತಾ ಶರಾಭಿ ಅವರ ಸಹಾಯದೊಂದಿಗೆ ಎಟಿಎಂ ಲೂಟಿ ಮಾಡಲಾಗಿದೆ ಎಂಬುದು ಬಯಲಾಗಿದೆ..

union bank atm robbery
ಯೂನಿಯನ್ ಬ್ಯಾಂಕ್ ಎಟಿಎಂ ದರೋಡೆ

By

Published : Dec 1, 2021, 7:54 PM IST

ಮುದ್ದೇಬಿಹಾಳ :ಯೂನಿಯನ್ ಬ್ಯಾಂಕ್‌ ಎಟಿಎಂ ದರೋಡೆ ಪ್ರಕರಣವನ್ನು ಭೇದಿಸಿರುವ ಮುದ್ದೇಬಿಹಾಳ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ, ಬಂಧಿತರಿಂದ 13 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

ಮುದ್ದೇಬಿಹಾಳ ವಿದ್ಯಾನಗರದ ನಿವಾಸಿ ಮಂಜುನಾಥ ಸಿದ್ದಯ್ಯ ಬಿದ್ನಾಳಮಠ, ಗಂಗಾವತಿ ತಾಲೂಕಿನ ಮರಕುಂಟಿಯ ಬಸವರಾಜ ಪಂಪಾಪತಿ ಮೇಟಿ, ಸುರೇಶ ಯಂಕಪ್ಪ ದೇವರಹಿಪ್ಪರಗಿ, ಯಲ್ಲಪ್ಪ ದೇವರಹಿಪ್ಪರಗಿ, ನಾಗರಾಜ ಗುರಪ್ಪ ಗೌಂಡಿ, ಯೂನಿಯನ್ ಬ್ಯಾಂಕ್ ಸಿಪಾಯಿಯಾದ ಸಿಂಧಗಿ ತಾಲೂಕಿನ ಹೂವಿನಹಳ್ಳಿಯ ವಿಠ್ಠಲ ಲಕ್ಕಪ್ಪ ಮಂಗಳೂರ, ಬ್ಯಾಂಕ್ ಕ್ಯಾಶಿಯರ್ ಮಿಸ್ಮಿತಾ ಹುಸೇನಪ್ಪ ಶರಾಭಿ ಬಂಧಿತ ಆರೋಪಿಗಳು.

ಘಟನೆಯ ವಿವರ

ನ.21ರಂದು ಯೂನಿಯನ್​ ಬ್ಯಾಂಕ್​ ಎಟಿಎಂ ಕಳ್ಳತನ ಮಾಡಿದ ಪ್ರಕರಣ ದಾಖಲಾಗಿತ್ತು. ಪರಿಶೀಲನೆ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಎಟಿಎಂ ಕಳ್ಳತನ ಮಾಡಿದ್ದ ವೇಳೆ ಕಳ್ಳರು ಎಟಿಎಂ ಬಾಗಿಲ ಬೀಗ ಮುರಿದದ್ದು ಬಿಟ್ಟರೆ, ಬೇರೆ ಯಾವುದೇ ಅನಾಹುತ ಮಾಡದೇ ಎಟಿಎಂನಲ್ಲಿದ್ದ ಹಣವನ್ನು ಎಗರಿಸಿದ್ದರು. ಪೊಲೀಸರು ದರೋಡೆಯ ಹಿಂದೆ ಬ್ಯಾಂಕ್ ಸಿಬ್ಬಂದಿಯ ಕೈವಾಡ ಇರುವ ಅನುಮಾನದ ಮೇರೆಗೆ ತನಿಖೆ ನಡೆಸಿದಾಗ ದರೋಡೆಯ ಸ್ವರೂಪ ಬಯಲಾಗಿದೆ.

ದರೋಡೆಗೆ ಬ್ಯಾಂಕ್​ ಕ್ಯಾಶಿಯರ್​ ಸಹಾಯ

ತನಿಖೆ ವೇಳೆ ಬ್ಯಾಂಕ್​ ಸಿಬ್ಬಂದಿಯನ್ನು ವಿಚಾರಣೆ ನಡೆಸಿದಾಗ ಬ್ಯಾಂಕ್​ನ ಕ್ಯಾಶಿಯರ್​ ಆಗಿದ್ದ ಮಿಶ್ಮಿತಾ ಶರಾಭಿ ಅವರ ಸಹಾಯದೊಂದಿಗೆ ಎಟಿಎಂ ಲೂಟಿ ಮಾಡಲಾಗಿದೆ ಎಂಬುದನ್ನು ಪತ್ತೆ ಮಾಡಲಾಗಿದೆ. ಆರೋಪಿ ಮಂಜುನಾಥ ಬಿದ್ನಾಳಮಠ ಕ್ಯಾಶಿಯರ್​ ಮಿಶ್ಮಿತಾ ಶರಾಭಿ ಅವರ ಜೊತೆ ಸೇರಿ ಎಟಿಎಂ ಲೂಟಿಗೆ ಯೋಜನೆ ರೂಪಿಸಿದ್ದಾನೆ.

ಬಳಿಕ ಮಿಶ್ಮಿತಾ ಅವರಿಂದ ಎಟಿಎಂ ಪಾಸ್​ವರ್ಡ್​ ಪಡೆದುಕೊಂಡು, ಇನ್ನೊಬ್ಬ ಆರೋಪಿ ವಿಠ್ಠಲ ಮಂಗಳೂರು ಸಹಾಯದಿಂದ ನಕಲಿ ಕೀಯನ್ನು ಬಳಸಿ ಇನ್ನುಳಿದ ಆರೋಪಿಗಳೊಂದಿಗೆ ಕೂಡಿಕೊಂಡು ಯೂನಿಯನ್ ಬ್ಯಾಂಕ್ ಎಟಿಎಂ ಶಟರ್​ ಕೀಯನ್ನು ಮುರಿದು ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿತರಿಂದ 13.18 ಲಕ್ಷ ರೂ. ನಗದು, ಎಟಿಎಂಗೆ ಹಣ ಹಾಕುವ ಕ್ಯಾಶೆಟ್‌ಗಳು, ಮಾರುತಿ ಸ್ವಿಫ್ಟ್ ಡಿಜೈರ್ ಕಾರು, 4 ಮೊಬೈಲ್​ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಭೇದಿಸಿದ ಬಸವನಬಾಗೇವಾಡಿ ಡಿಎಸ್​ಪಿ ಅರುಣ್​ಕುಮಾರ ಕೋಳೂರ, ಮುದ್ದೇಬಿಹಾಳ ಸಿಪಿಐ ಆನಂದ್​ ವಾಘ್ಮೋಡೆ, ಪಿಎಸ್​ಐ ರೇಣುಕಾ ಜಕನೂರ, ಪ್ರೊಬೇಷನರಿ ಪಿಎಸ್​ಐ ದೀಪಾ ಮತ್ತು ಸ್ಥಳೀಯ ಠಾಣೆಯ ಕ್ರೈಂ ಮತ್ತು ಸಿವಿಲ್ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್​ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details