ಬಾಗಲಕೋಟೆ: ಭಾರತ ದೇಶವು ಜಾಗತಿಕವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಸಂಕಲ್ಪದೊಂದಿಗೆ ದಾಪುಗಾಲಿಡುತ್ತಿದೆ. 2047ಕ್ಕೆ ಭಾರತ ಸರ್ವಾಂಗೀಣ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂದು ಬೆಂಗಳೂರಿನ ಇಸ್ರೋದ ಯು.ಆರ್.ರಾವ್ ಸ್ಯಾಟ್‌ಲೈಟ್ ಸೆಂಟರ್‌ನ ನಿರ್ದೇಶಕ ಎಮ್. ಸಂಕರನ್ ಹೇಳಿದರು.
ನಗರದ ಪ್ರತಿಷ್ಠಿತ ಬಿವಿವಿ ಸಂಘದ ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನ ನೂತನ ಸಭಾಭವನದಲ್ಲಿ ನಡೆದ 13ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದ ಶ್ರೇಷ್ಠ ಮೌಲ್ಯಗಳನ್ನು ಅಳವಡಿಸಿಕೊಂಡು ವಿಶಾಲ ಮತ್ತು ಆಳವಾದ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಹೊಸ ಜಗತ್ತಿಗೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ವೃತ್ತಿಪರ ಜ್ಞಾನ ಮತ್ತು ವೈಯಕ್ತಿಕ ಸ್ವಭಾವಗಳಿಂದ ವಿಶ್ವಾಸ ಮತ್ತು ಗೌರವ ಗಳಿಸಿಕೊಳ್ಳಬೇಕು. ಜೀವನದಲ್ಲಿ ಸೋಲುಗಳನ್ನು ಸವಾಲಾಗಿ ಸ್ವೀಕರಿಸಿ ಸೃಜನ ಶೀಲತೆಯಿಂದ ಉತ್ಕೃಷ್ಟತೆಯನ್ನು ಸಾಧಿಸಬೇಕು. ಇಂದು ವಿಶ್ವವು ವಿವಿಧ ಕೊರೊನಾ ಪ್ರಭಾವ, ನೈಸರ್ಗಿಕ ಸಂಪನ್ಮೂಲಗಳ ಬರಿದಾಗುವಿಕೆ, ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳಿಂದ ತತ್ತರಿಸಿದೆ. ಆದ್ದರಿಂದ ಭೂಮಿ ಮತ್ತು ಪರಿಸರವನ್ನು ಮುಂದಿನ ಪೀಳಿಗೆಯವರೆಗೆ ಸುರಕ್ಷಿತವಾಗಿ ತಲುಪಿಸುವ ಸಾಮಾಜಿಕ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಮೈಸೂರಿನ ಇನ್ಫೋಸಿಸ್ ಅಭಿವೃದ್ಧಿ ಕೇಂದ್ರದ ಉಪಾಧ್ಯಕ್ಷ ಹಾಗೂ ಮುಖ್ಯಸ್ಥರಾದ ವಿನಾಯಕ ಪಿ ಹೆಗಡೆ ಮಾತನಾಡಿ, ವೃತ್ತಿ ಜೀವನಕ್ಕೆ ಶಿಕ್ಷಣ ಭದ್ರ ಬುನಾದಿಯಾಗಿದ್ದು, ವಿವಿಧ ಮೂಲಗಳಿಂದ ಪ್ರೇರಣೆಯನ್ನು ಪಡೆದುಕೊಂಡು ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. 30 ವರ್ಷಗಳ ಹಿಂದೆ ನೋಡಿದ ಬಾಗಲಕೋಟೆ ನಗರಕ್ಕೂ ಇವಾಗ ನೋಡುವ ಬಾಗಲಕೋಟೆಗೂ ತುಂಬಾನೆ ಬದಲಾವಣೆಯಾಗಿದೆ. ಇದರಲ್ಲಿ ಬಿವಿವಿ ಸಂಘದ ಪಾತ್ರ ದೊಡ್ಡದಾಗಿದೆ ಎಂದರು.