ಬಾಗಲಕೋಟೆ:ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ಹಿಪ್ಪರಗಿ ಜಲಾಶಯದಿಂದ ಕೃಷ್ಣಾ ನದಿಗೆ 72 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಕೃಷ್ಣಾ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಉಂಟಾಗಿದೆ.
ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮಾತನಾಡಿದರು ಜಿಲ್ಲೆಯ ಹಿಪ್ಪರಗಿ ಜಲಾಶಯಕ್ಕೆ ಮಹಾರಾಷ್ಟ್ರದಿಂದ ನೀರು ಹರಿದು ಬರುತ್ತಿದ್ದು, ನೀರು ಬಿಡುಗಡೆ ಬಗ್ಗೆ ಹಿಪ್ಪರಗಿ ಜಲಾಶಯದ ಕಾಯ೯ಕಾರಿ ಅಭಿಯಂತರ ಕೆ.ಕೆ. ಜಾಲಿಬೇರಿ ಮಾಹಿತಿ ನೀಡಿದ್ದಾರೆ. ಕೃಷ್ಣಾ ನದಿ ಪಾತ್ರದ ಜನರು ಸುರಕ್ಷಿತ ತಾಣಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಇತ್ತ ಘಟಪ್ರಭಾ ನದಿಗೆ 26 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದು, ಮುಧೋಳ ತಾಲೂಕಿನ ನದಿ ತೀರದ ಗ್ರಾಮಗಳಿಗೂ ಪ್ರವಾಹ ಭೀತಿ ಉಂಟಾಗಿದೆ. ಅಲ್ಲದೇ ಈಗಾಗಲೇ ಕೆಲವೆಡೆ ಸೇತುವೆಗಳು ಜಲಾವೃತಗೊಂಡಿವೆ.
ಮಿಜಿ೯- ಅಕ್ಕಿಮರಡಿ, ಮಹಾಲಿಂಗಪೂರ-ಯಾದವಾಡ, ನಂದಗಾಂವ- ಮಹಾಲಿಂಗಪೂರ ಸೇತುವೆಗಳು ಮುಳುಗಡೆ ಆಗಿದ್ದು, ಪ್ರವಾಹ ಭೀತಿ ಎದುರಾಗಿದೆ. ಕೃಷ್ಣಾ ಮತ್ತು ಘಟಪ್ರಭಾ ನದಿಗೆ ಹೆಚ್ಚುವರಿ ನೀರು ಬಿಡುಗಡೆ ಬೆನ್ನಲ್ಲೆ ಆಲಮಟ್ಟಿ ಹಿನ್ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ. ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿದ ಮಳೆ ಹಿನ್ನೆಲೆ, ಮಾಚಕನೂರು ಹೊಳೆ ಬಸವೇಶ್ವರ ದೇಗುಲ ಸಂಪೂರ್ಣ ಜಲಾವೃತವಾಗಿದೆ.
ಮುಧೋಳ ತಾಲೂಕಿನ ಯಾದವಾಡ ಸೇತುವೆ, ಮಾಚಕನೂರು ಹಾಗೂ ಚಿಂಚಖಂಡಿ ಸೇತುವೆ ಮೇಲೆ ನೀರು ಬರುವ ಸಾಧ್ಯತೆ ಇದ್ದು, ಪ್ರಮಾಣ ಅಂಗವಾಗಿ ಜಿಲ್ಲಾಡಳಿತ ಎಲ್ಲ ಸಿದ್ದತೆ ಮಾಡಿಕೊಂಡಿದೆ. ಕೃಷ್ಣ ನದಿ ಹರಿಯುತ್ತಿರುವ ಜಮಖಂಡಿ ತಾಲೂಕಿನ ನದಿ ದಡ ಮೇಲೆ ಇರುವ ಗ್ರಾಮಗಳಿಗೆ ಮುನ್ಸೂಚನೆ ನೀಡಲಾಗಿದೆ. ಮುಳುಗಡೆ ಆಗಿರುವ ಪ್ರದೇಶಗಳಿಗೆ ಸಂಚಾರ ಮಾಡಲಾಗುತ್ತದೆ. ಪ್ರವಾಹ ಬಂದರೂ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ತಿಳಿಸಿದ್ದಾರೆ.
ಓದಿ:ಹೊಸನಗರದಲ್ಲಿ 292 ಮಿಮೀ ಮಳೆ: ಧುಮ್ಮಿಕ್ಕುತ್ತಿರುವ ಜೋಗ ಜಲಪಾತ