ಬಾಗಲಕೋಟೆ: ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ಬರುತ್ತಿದ್ದಂತೆ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಈಗಿನಿಂದಲೆ ಸಿದ್ದತೆ ನಡೆಸುತ್ತಿದೆ ಅನಿಸುತ್ತಿದೆ.
ಬಾಗಲಕೋಟೆಯಲ್ಲಿ ಇಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಆಕಾಂಕ್ಷಿ ಆಗಿದ್ದು, ಹೈಕಮಾಂಡ್ ನನಗೆ ಟಿಕೆಟ್ ನೀಡುವ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಹೇಳಿದ್ದರು. ನವನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಪಿ.ಸಿ.ಗದ್ದಿಗೌಡರ ಜಿಲ್ಲೆಗೆ ಕೊಡುಗೆ ಏನು ಎಂದು ಪ್ರಶ್ನೆ ಮಾಡುವುದರೊಂದಿಗೆ ನಾಲ್ಕು ಅವಧಿಗೆ ಸಂಸದರಾಗಿ ಯಾವುದೇ ಕೆಲಸ ಮಾಡಿಲ್ಲ ಸಂಸದರಾಗಿ ಕಳೆದ 20 ವರ್ಷಗಳಿಂದ ಅಧಿಕಾರದಲ್ಲಿದ್ದು ಅಭಿವೃದ್ದಿ ಕಾರ್ಯಗಳು ಶೂನ್ಯವಾಗಿದೆ ಎಂದು ಆರೋಪಿಸಿದ್ದಾರೆ.
ಸಂಸದರು 2021 ರಿಂದ ಇಲ್ಲಿಯ ವರೆಗೆ ಸದನದಲ್ಲಿ ಯಾವುದೇ ಪ್ರಶ್ನೆಗಳು ಎತ್ತಿಲ್ಲ. ಅದಕ್ಕೂ ಪೂರ್ವದಲ್ಲಿ ಕೆಲವು ಪ್ರಶ್ನೆಗಳು ಮಾಡಿದ್ದು, ಅದರಲ್ಲಿ ನಮ್ಮ ಮತಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳು ಇಲ್ಲ. ಇಂತಹ ಸಂಸದರಿಂದ ಜನರು ಏನು ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದ್ದಾರೆ. ಬಾಗಲಕೋಟೆ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು, ಏಮ್ಸ್ ಸ್ಥಾಪನೆ ನಿರಾಸಕ್ತಿ ತೋರಿದ್ದರಿಂದ ಕೈ ತಪ್ಪಿ ಹೋಗಿದೆ. ಪ್ರವಾಸೋದ್ಯಮಕ್ಕೆ ಯಾವುದೇ ಒತ್ತು ನೀಡಿಲ್ಲ. ಐಹೊಳೆ, ಪಟ್ಟದಕಲ್ಲು ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿದ್ದು ಯಾವುದೇ ಮೂಲ ಸೌಕರ್ಯಗಳು ಇಲ್ಲ. ರಸ್ತೆ ಸಂಪರ್ಕ, ಸಾರಿಗೆ ವ್ಯವಸ್ಥೆಗಳಿಲ್ಲ. ಪ್ರವಾಸೋದ್ಯಮ ಅಭಿವೃದ್ದಿ ಪಡಿಸಿದಲ್ಲಿ ಉದ್ಯೋಗ ಸೃಷ್ಠಿಸ ಬಹುದಾಗಿತ್ತು. ಆದರೆ, ಸಂಸದರು ಯಾವುದಕ್ಕೂ ಆಸಕ್ತಿ ತೋರಿಲ್ಲ ಎಂದು ಆರೋಪಿಸಿದರು.
ರೈತರ, ನೇಕಾರರ ಸಮಸ್ಯೆಗಳಿಗೆ ಒತ್ತು ನೀಡಿಲ್ಲ. ನೇಕಾರರ ಸೂಕ್ತವಾದ ಮಾರುಕಟ್ಟೆ ಕಲ್ಪಿಸಿಕೊಟ್ಟಿಲ್ಲ. ಇದರಿಂದಾಗಿ ನೇಕಾರರ ಉದ್ಯೋಗ ಕಣ್ಮರೆಯಾಗುತ್ತಿದೆ. ರೈತರಿಗೆ ಬೆಂಬಲ ಬೆಲೆ ನಿಗದಿಪಡಿಸುವಲ್ಲಿ ಯಾವುದೇ ಪ್ರಯತ್ನ ಮಾಡಲಿಲ್ಲ. ಪ್ರವಾಹ ಸಂದರ್ಭದಲ್ಲಿ ರೈತರ ಸಮಸ್ಯೆಗಳನ್ನು ಆಲಿಸಲು ಬರಲಿಲ್ಲ. ಕೊರೊನಾ ಸಂದರ್ಭದಲ್ಲಿ ಮಾಸ್ಕ ವಿತರಣೆ ಮಾಡಿದ್ದು ಬಿಟ್ಟರೆ ಅವರ ಉಳಿದ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ದೂರಿದರು.
ಬಾಗಲಕೋಟೆ ಕುಡಚಿ ರೇಲ್ವೆ ಮಾರ್ಗ ಅರ್ಧಕ್ಕೆ ನಿಂತಿದ್ದು, ಇನ್ನೂ ಖಜ್ಜಿಡೋಣಿ ವರೆಗೆ ಮಾತ್ರ ಕೆಲಸ ಮಾಡಿದ್ದಾರೆ. ಇತರ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗುತ್ತಿವೆ. ಆದರೆ, ಬಾಗಲಕೋಟೆಯಲ್ಲಿ ಇನ್ನೂವರೆಗೆ ವಿಮಾನ ನಿಲ್ದಾಣ ಸ್ಥಾಪನೆಗೆ ಮುತುವರ್ಜಿ ವಹಿಸಿಲ್ಲ. ಯುಕೆಪಿ ಸಂತ್ರಸ್ತರ ಕೂಗಿಗೆ ಸಂಸದರು ಸ್ಪಂದಿಸಿಲ್ಲ ಎಂದು ವೀಣಾ ಕಾಶಪ್ಪನವರ್ ಆರೋಪಿಸಿದರು.