ಬಾಗಲಕೋಟೆ :ಕಾಂಗ್ರಸ್ ಪಕ್ಷದಲ್ಲಿ ನಾನು ಮುಖ್ಯಮಂತ್ರಿ ಆಗಬೇಕಂತ 93 ವರ್ಷದ ಶಾಮನೂರ್ ಶಿವಶಂಕರಪ್ಪ, 83 ವರ್ಷದ ಮಲ್ಲಿಕಾರ್ಜುನ ಖರ್ಗೆ,78 ವರ್ಷದ ಸಿದ್ದರಾಮಯ್ಯ ಹಾಗು ನಾನೂ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದೇನೆ ಎಂದು ಡಾ. ಜಿ.ಪರಮೇಶ್ವರ್, ಜೊತೆಗೆ ಎಂ.ಬಿ. ಪಾಟೀಲರು ಎಲ್ಲರೂ ಮುಖ್ಯಮಂತ್ರಿ ಆಗಬೇಕಂತ ಕುಳಿತಿದ್ದಾರೆ. ಆದರೇ ಇವರಿಗೆ ರಾಜ್ಯಕ್ಕೆ ಏನು ಮಾಡಬೇಕು, ಜನರಿಗೆ ಏನು ಮಾಡಬೇಕು, ಯಾವ ಯಾವ ಅಭಿವೃದ್ಧಿ ಕೆಲಸ ಮಾಡಬೇಕು ಎಂಬುದು ತಿಳಿದಿಲ್ಲ. ಇವರಿಗೆ ಕೇವಲ ಕುರ್ಚಿ ಚಿಂತೆಯಾಗಿದೆ. ಆದರೇ ನಮ ಪಕ್ಷದಲ್ಲಿ ಈ ತರಹದ ಸನ್ನಿವೇಶಗಳು ಇಲ್ಲ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಕಾಂಗ್ರೆಸ್ ನಾಯಕರ ಕುರಿತು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಎಲ್ಲಿ ನಿಂತರೂ ಸೋಲುತ್ತಾರೆ- ಕಾರಜೋಳ್ :ಬಾಗಲಕೋಟೆ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ 45 ವರ್ಷಗಳಿಂದ ರಾಜಕಾರಣದಲ್ಲಿದ್ದಾರೆ. ಇಂತವರಿಗೆ ಒಂದು ಸುರಕ್ಷಿತ ಕ್ಷೇತ್ರ ಸಿಗುತ್ತಿಲ್ಲ ಎಂದರೆ ಅದಕ್ಕಿಂತ ದೊಡ್ಡ ದೌರ್ಬಲ್ಯ ಬೇರೆ ಇಲ್ಲ. ಸಿದ್ದರಾಮಯ್ಯ ಚುನಾವಣೆಗೆ ಎಲ್ಲಿ ನಿಂತರೂ ಸೋಲುವುದು ಖಂಡಿತ. ನೂರಕ್ಕೆ ನೂರರಷ್ಟು ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗೂ ಸೋಲಿನ ಭೀತಿ ಕಾಡುತ್ತಿದೆ ಎಂದರು. ಭಾರತವನ್ನು ತುಂಡು ತುಂಡು ಮಾಡಿದವರೇ ಇಂದು ಭಾರತ್ ಜೋಡೊ ಯಾತ್ರೆ ಮಾಡುತ್ತಿದ್ದಾರೆ. ಇದೆಲ್ಲ ಹಾಸ್ಯಾಸ್ಪದವಾಗಿದ್ದು, ಮೇ ತಿಂಗಳ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಇದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಗೆಲ್ಲುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.