ಬಾಗಲಕೋಟೆ :ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಆರ್ ಪಾಟೀಲ್ ನೇತೃತ್ವದಲ್ಲಿ ನಡೆಯುತ್ತಿರುವ 'ಸಂಕಲ್ಪ ಯಾತ್ರೆ'ಗೆ ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಅದ್ಧೂರಿ ಸ್ವಾಗತ ಕೋರಲಾಗಿದೆ. ಉತ್ತರ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ ಯೋಜನೆ, ಮಹಾದಾಯಿ ಹಾಗೂ ನವಲಿ ಜಲಾಶಯ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಎಸ್ ಆರ್ ಪಾಟೀಲ್ ನೇತೃತ್ವದಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ.
ಬಾದಾಮಿಯಲ್ಲಿ ನಡೆದ ಸಂಕಲ್ಪಯಾತ್ರೆಯಲ್ಲಿ ಮಾಜಿ ಸಚಿವಎಸ್ ಆರ್ ಪಾಟೀಲ್ ಮಾತನಾಡಿರುವುದು.. ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಅಡಿಯಲ್ಲಿ ಪಕ್ಷಾತೀತವಾಗಿ ಎಸ್.ಆರ್ ಪಾಟೀಲ್ ನೇತೃತ್ವದಲ್ಲಿ ನಡೆಯುತ್ತಿರುವ ಸಂಕಲ್ಪ ಯಾತ್ರೆ ನಿನ್ನೆ(ಗುರುವಾರ) ಬಾಗಲಕೋಟೆ ಜಿಲ್ಲೆಯಲ್ಲಿ ಮುಂದುವರಿದಿದೆ. 2ನೇ ದಿನವಾದ ನಿನ್ನೆ ಬಾದಾಮಿ ತಾಲೂಕಿನ ಶಿವಯೋಗ ಮಂದಿರದಿಂದ ಆರಂಭಗೊಂಡಿತು. ಬಾದಾಮಿ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿದ ಮುಖಂಡರು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಕೃಷ್ಣಾ, ಮಹಾದಾಯಿ ಹಾಗೂ ನವಲಿ ಪ್ರದೇಶದ ನೀರಾವರಿಗಾಗಿ ನಡೆಯುತ್ತಿರುವ ಈ ಸಂಕಲ್ಪ ಯಾತ್ರೆಗೆ ನಗರದ ಜನರು ಭರ್ಜರಿ ಬೆಂಬಲ ವ್ಯಕ್ತಪಡಿಸಿದರು. ನರಗುಂದದಿಂದ ಆರಂಭವಾಗಿರುವ ಟ್ರ್ಯಾಕ್ಟರ್ ಯಾತ್ರೆ ನಗರಕ್ಕೆ ಆಗಮಿಸುತ್ತಿದ್ದಂತೆ ಜೆಸಿಬಿ ಮೂಲಕ ಅಭಿಮಾನಿಗಳು ಎಸ್.ಆರ್.ಪಾಟೀಲ್ ಅವರಿಗೆ ಹೂಮಳೆ ಸುರಿಸಿದರು.
ಅಲ್ಲದೇ, ಬಸವೇಶ್ವರ ಸರ್ಕಲ್ ಬಳಿ 1 ಲಕ್ಷ 50 ಸಾವಿರ ರೂ. ಮೌಲ್ಯದ 800 ಕೆಜಿ ತೂಕದ ಬೃಹತ್ ಸೇಬು ಹಾರ ಹಾಕಿ ಸಂಭ್ರಮಿಸಿದರು. ಬಾಗಲಕೋಟೆ ನಗರದ ವಿದ್ಯಾಗಿರಿ ಬಳಿ ಮಾರ್ಗ ಮಧ್ಯೆ ಎಸ್. ಆರ್ ಪಾಟೀಲ್ ಪತ್ನಿ ಉಮಾದೇವಿ ಆರತಿ ಬೆಳಗಿ ಶುಭ ಕೋರಿದರು. ನೀರಾವರಿ ಯೋಜನೆ ಅನುಷ್ಠಾನಕ್ಕೆ ಕೈಗೊಂಡ ಹೋರಾಟ ಯಶಸ್ವಿಯಾಗಲಿ ಎಂದು ಹಾರೈಸಿದರು.
ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಂಡು ಸ್ವಾಭಿಮಾನಿ ವೇದಿಕೆ ಮೂಲಕ ನಡೆಸುತ್ತಿರುವ ಎಸ್.ಆರ್ ಪಾಟೀಲ್ ಹೋರಾಟಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಜನರು ಬಿಸಿಲನ್ನು ಲೆಕ್ಕಿಸದೆ ರ‍್ಯಾಲಿಯಲ್ಲಿ ಭಾಗಿಯಾಗಿದ್ದಾರೆ. ಇಂದು ವಿಜಯಪುರದಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಯಲಿದೆ. ಗದಗ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ 108 ಗ್ರಾಮಗಳಲ್ಲಿ ಎಸ್.ಆರ್ ಪಾಟೀಲ್ ಐದು ದಿನಗಳ ಕಾಲ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ವಿನೂತನ ಹೋರಾಟ ಮಾಡುತ್ತಿದ್ದಾರೆ.
ಈ ಹೋರಾಟ ಅವರ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿಯೇ ಅಥವಾ ತಮ್ಮ ಪಕ್ಷದಲ್ಲಿ ಇರುವ ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡುವ ಸಿದ್ದತೆಯೇ? ಎಂಬುದು ಮಾತ್ರ ಚರ್ಚೆಯ ವಿಷಯವಾಗಿದೆ.
ಇದನ್ನೂ ಓದಿ:ಉತ್ತರ ಕರ್ನಾಟಕ ನೀರಾವರಿ ಯೋಜನೆ ಜಾರಿಗೆ ಸಂಕಲ್ಪ ಯಾತ್ರೆ