ಬಾಗಲಕೋಟೆ: ವಿಧಾನಸಭಾ ಚುನಾವಣೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ವಿಧಾನಸಭಾ ಕ್ಷೇತ್ರದಿಂದಲೇ ಮತ್ತೆ ಸ್ಪರ್ಧೆ ಮಾಡಬೇಕು ಇಲ್ಲವಾದಲ್ಲಿ ಅವರ ಮನೆಯ ಎದುರು ಧರಣಿ ಮಾಡುವುದಾಗಿ ಸಿದ್ದರಾಮಯ್ಯ ಅವರ ಆಪ್ತರು ತಿಳಿಸುವ ಮೂಲಕ ಬಾದಾಮಿಯಲ್ಲೇ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಹೊಳಬಸು ಶೆಟ್ಟರ್, ಎಂ.ಬಿ.ಹಂಗರಗಿ, ರಾಜ ಮಹಮ್ಮದ್ ಬಾಗವಾನ, ಬಾದಾಮಿ ತಾಲೂಕಿನ ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರಾದ ಹನಮಂತಗೌಡ ಯಕ್ಕಪ್ಪನವರು ಸೇರಿದಂತೆ ವಿವಿಧ ಮುಖಂಡರು ನವನಗರದ ಪತ್ರಿಕಾ ಭವನಕ್ಕೆ ಆಗಮಿಸಿ, ಮಾಧ್ಯಮಗಳ ಮೂಲಕ ಮತ್ತೊಮ್ಮೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದರು.
ಈಗಾಗಲೇ ಕ್ಷೇತ್ರದ ಶಾಸಕರಾಗಿ ಸುಮಾರು 3 ಸಾವಿರ ಕೋಟಿ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡಿದ್ದಾರೆ. ಐತಿಹಾಸಿಕ ತಾಣವಾಗಿರುವ ಬಾದಾಮಿ ಅಭಿವೃದ್ಧಿ ಆಗಿದೆ. ಮತ್ತೇ ಸ್ಪರ್ಧೆ ಮಾಡಿದರೆ, ಮುಂದೆ ಮುಖ್ಯಮಂತ್ರಿ ಆಗಲಿರುವ ಅವರಿಂದ ಮತ್ತಷ್ಟು ಅಭಿವೃದ್ಧಿ ಆಗುತ್ತದೆ. ಇಡೀ ಬಾಗಲಕೋಟೆ ಜಿಲ್ಲೆಯು ಮುಖ್ಯಮಂತ್ರಿ ಕ್ಷೇತ್ರವಾಗಿ ಅಭಿವೃದ್ಧಿ ಹೊಂದುತ್ತದೆ.
ಈಗಾಗಲೇ ವಿವಿಧ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರು ಸ್ಪರ್ಧೆ ಮಾಡುವಂತೆ ಕರೆ ನೀಡಲಾಗಿದೆ. ಆದರೆ, ಅವರು ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು. ಇಲ್ಲವಾದಲ್ಲಿ ಅವರ ಮನೆ ಎದುರು ಧರಣಿ ನಡೆಸುವುದಾಗಿ ತಿಳಿಸಿದ್ದಾರೆ.
ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲೇ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಒತ್ತಾಯ ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧೆ ಮಾಡುವುದಾಗಿ ಹೇಳುವ ವರೆಗೂ ಧರಣಿ ಕೈ ಬಿಡಿಲ್ಲ ಎಂದು ಅವರ ಆಪ್ತರಾದ ಹೊಳಬಸು ಶೆಟ್ಟರ್ ತಿಳಿಸಿದ್ದಾರೆ. ಬಾದಾಮಿಗೆ ಬಂದು ಬರೀ ನಾಮಪತ್ರ ಸಲ್ಲಿಸಿ ಹೋದರೆ ಸಾಕು, ಅವರನ್ನು ಇಡೀ ಕಾರ್ಯಕರ್ತರ ಸಮೂಹ ನಿಂತು ಜಯಗೊಳಿಸುವಂತೆ ಕೆಲಸ ಮಾಡುತ್ತೇವೆ. ಇಡೀ ರಾಜ್ಯದಲ್ಲಿ ಸುತ್ತಾಟ ನಡೆಸಬೇಕಾಗಿರುವುದರಿಂದ ಬಾದಾಮಿಗೆ ಬಂದು ಪ್ರಚಾರ ಮಾಡದಿದ್ದರೂ, ಅವರನ್ನು ಜಯಗೊಳಿಸುವಂತೆ ಮಾಡಲಾಗುವುದು ಎಂದು ಕಾರ್ಯಕರ್ತರು ತಿಳಿಸಿದ್ದಾರೆ.
ನಮ್ಮಲ್ಲಿ ಯಾವುದೇ ಬಣಗಳು ಇಲ್ಲ, ಮಾಜಿ ಸಚಿವರಾದ ಬಿ.ಬಿ ಚಿಮ್ಮನಕಟ್ಟಿ ಅವರು ಆಕಾಂಕ್ಷೆ ಆಗಿದ್ದಾರೆ. ಹೈ ಕಮಾಂಡ್ ತೆಗೆದುಕೊಂಡ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ. ಆದರೆ, ಬಾದಾಮಿಗೆ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಗೆಲವು ನಿಶ್ಚಿತ ಎಂದು ಆಪ್ತರು ವಿಶ್ವಾಸ ವ್ಯಕ್ತಪಡಿಸಿ, ಮತ್ತೊಮ್ಮೆ ಬಾದಾಮಿಯಲ್ಲಿ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಪ್ರಧಾನಿಗೆ ಕಿನ್ನಾಳ ಕಲೆಯ ಕಾಮಧೇನು ಉಡುಗೊರೆ ನೀಡಿದ ಸಚಿವೆ ಜೊಲ್ಲೆ