ಬಾಗಲಕೋಟೆ :ನಗರಸಭೆ ಆಯುಕ್ತರ ಕುರ್ಚಿಗಾಗಿ ಬಾಗಲಕೋಟೆ ನಗರದಲ್ಲಿ ಗೊಂದಲ ಮುಂದುವರೆದಿದೆ. ಇತ್ತೀಚೆಗಷ್ಟೇ ಆರೋಗ್ಯ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳು ಗೊಂದಲ ಮಾಡಿಕೊಂಡಿದ್ದರು. ಅದು ಮಾಸುವ ಮುಂಚೆ ಈಗ ನಗರಸಭೆ ಆಯುಕ್ತರ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ಮಧ್ಯೆ ಪೈಪೋಟಿ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ. ಹಿಂದಿನ ಆಯುಕ್ತ ಹಾಗೂ ಹಾಲಿ ಆಯುಕ್ತರ ಮಧ್ಯೆ ಕುರ್ಚಿಗಾಗಿ ಸ್ಪರ್ಧೆ ಏರ್ಪಟ್ಟಿದ್ದು, ಒಂದೇ ಚೇಂಬರ್ನಲ್ಲಿ ಕುಳಿತ ಇಬ್ಬರೂ ಆಯುಕ್ತರು, ಆಡಳಿತ ನಡೆಸಲು ಮುಂದಾಗಿದ್ದಾರೆ.
ಹಿಂದಿನ ನಗರಸಭೆ ಆಯುಕ್ತ ಆರ್ ವಾಸನ್ ಇತ್ತೀಚೆಗೆ ವರ್ಗಾವಣೆಗೊಂಡಿದ್ದರು. ಹೊಸದಾಗಿ ರಮೇಶ್ ಜಾಧವ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ಹೀಗಾಗಿ, ರಮೇಶ್ ಜಾಧವ್ ಮತ್ತು ಆರ್. ವಾಸನ್ ನಡುವೆ ಕುರ್ಚಿಗಾಗಿ ಸ್ಪರ್ಧೆ ನಡೆಯುತ್ತಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರ್ತಿದ್ದಂತೆ ವರ್ಗಾವಣೆಯಾಗಿದ್ದ ಆರ್ ವಾಸನ್, ವರ್ಗಾವಣೆ ಪ್ರಶ್ನಿಸಿ ಕೆಎಟಿ ಮೆಟ್ಟಿಲೇರಿದ್ದರು. ಸರ್ಕಾರಿ ಆದೇಶದಿಂದ ಬಾಗಲಕೋಟೆ ನಗರಸಭಾ ಆಯುಕ್ತರ ಹುದ್ದೆಗೆ ರಮೇಶ್ ಜಾಧವ್ ಅವರನ್ನು ನಿಯುಕ್ತಿಗೊಳಿಸಲಾಗಿತ್ತು. ಆಗಸ್ಟ್ 12 ರಂದು ಆರ್ ವಾಸನ್ ಅವರ ವರ್ಗಾವಣೆಯಾಗಿತ್ತು. ಸರ್ಕಾರದ ಆದೇಶ ತಂದು ಹುದ್ದೆ ಅಲಂಕರಿಸಿದ್ದೇನೆ ಎಂದು ಆಯುಕ್ತ ರಮೇಶ್ ಜಾಧವ್ ತಿಳಿಸಿದ್ದಾರೆ.
ಮತ್ತೊಂದೆಡೆ ಕೆಎಟಿಯಿಂದ ಆದೇಶ ತಗೊಂಡು ಬಂದಿರುವೆ ಎಂದು ಹಿಂದಿನ ನಗರಸಭಾ ಆಯುಕ್ತ ಆರ್ ವಾಸನ್ ತಿಳಿಸಿದ್ದಾರೆ. ಇಬ್ಬರ ಅಧಿಕಾರಿಗಳಿಂದ ಯಾರ ಆದೇಶ ಪಾಲಿಸಬೇಕು ಎಂದು ಇತರ ಸಿಬ್ಬಂದಿ ಗೊಂದಲಕ್ಕೆ ಒಳಗಾಗಿದ್ದಾರೆ. ನಂತರ ಕೆಎಟಿ ಕಾನೂನು ಆದೇಶ ಪಾಲಿಸುವುದಾಗಿ ಜಾಧವ್ ಮಾಹಿತಿ ನೀಡಿ, ಆಯುಕ್ತ ಕಚೇರಿಯಿಂದ ಹೂರಗೆ ಹೋದರು.
ಇದನ್ನೂ ಓದಿ:ಬಳ್ಳಾರಿ ಮಹಾನಗರ ಪಾಲಿಕೆ: ಆಯುಕ್ತರ ವಿರುದ್ಧ ಪ್ರತಿಭಟನೆ ನಡೆಸಿದ ಮೇಯರ್, ಸದಸ್ಯರು