ಬಾಗಲಕೋಟೆ: ಅಕ್ಕನಿಗೆ ಮತ್ತು ತನಗೆ ಮೋಸ ಮಾಡಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಂಡ ಯುವಕ ತನ್ನ ಆಸ್ತಿಯನ್ನು ಶಾಲೆಗೆ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ಅಕ್ಕನಿಗೆ ಮಕ್ಕಳಿಲ್ಲ ಎಂದು ಸಹೋದರನೇ ದತ್ತು ಪುತ್ರನಾಗಿ ಮಡಿಲು ಸೇರಿದ್ದ. ಆದರೆ, ದುರಂತ ಎಂದರೆ ಈ ನಡುವೆ ಅಕ್ಕನ ಗಂಡ ಸಾವನ್ನಪ್ಪಿದ್ದಾರೆ.
ಅಕ್ಕನ ಗಂಡ ಸಾವನ್ನಪ್ಪಿದ ನಂತರ ಭಾವನಿಗೆ ಸೇರ ಬೇಕಾದ ಆಸ್ತಿ ನೀಡದೇ ಅವರ ತಮ್ಮಂದರಿರು ವಂಚಿಸಿದ್ದರು. ಅಲ್ಲದೇ ಭಾವನ ಮನೆ ಕಡೆಯವರು ಹುಡುಗಿ ಕೊಟ್ಟು ಮದುವೆ ಮಾಡುತ್ತೇವೆ ಎಂದು ಆಶ್ವಾನ ನೀಡಿದ್ದರು ಅದನ್ನೂ ಮಾಡದೇ ವಂಚಿಸಿದ್ದಾರೆ. ಇದರಿಂದ ಬಾಗಲಕೋಟೆ ಜಿಲ್ಲೆಯ ಹುನಗುಂದ ಹೂವನೂರ ಗ್ರಾಮದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಕ್ಕನ ಗಂಡನ ಲೆಕ್ಕದಲ್ಲಿ ಬರಬೇಕಿದ್ದ ನಾಲ್ಕು ಎಕರೆ ಜಮೀನುನ್ನು ಭಾವನ ಸಹೋದರರು ನೀಡದೇ ಮೋಸ ಮಾಡಿದ್ದರು. ನಾಗರಾಜ ಕಳ್ಳಿಗುಡ್ಡ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಕ್ಕನ ಮೈದುನರಾದ ಅಂದಾನೆಪ್ಪ, ರಾಮು, ಶಿವು ಹೆಸರಲ್ಲಿ ಡೆತ್ ನೋಟ್ ಬರೆದು ಸಾವಿಗೆ ಶರಣಾಗಿದ್ದಾನೆ.
ನನ್ನ ಸಾವಿಗೆ ಇವರೇ ಕಾರಣ, ನನಗೆ ಬರಬೇಕಿದ್ದ ನಾಲ್ಕು ಎಕರೆ ಆಸ್ತಿ ಕೊಡದೆ ಮೋಸ ಮಾಡಿದರು. ರಾಮಣ್ಣ ನಂಬಿಸಿ ಕುತ್ತಿಗೆ ಕೊಯ್ದಿದ್ದಾರೆ. ಊರಿನ ಜನ ಈ ಐದು ಅಣ್ತಮ್ಮಂದಿರನ್ನು ನಂಬಬೇಡಿ. ನನ್ನ ಅಂತ್ಯಸಂಸ್ಕಾರ ಇದೇ ಊರಲ್ಲೇ ಮಾಡಿ. ಅಕ್ಕ ಅವ್ವ, ಸ್ನೇಹಿತರೆ ನನ್ನ ಕ್ಷಮಿಸಿ ಎಂದು ಡೆತ್ ನೋಟಲ್ಲಿ ಉಲ್ಲೇಖಿಸಿದ್ದಾನೆ.