ಬಾಗಲಕೋಟೆ :ಕೋವಿಡ್-19 ರೋಗ ಹತೋಟಿಗೆ ಬಂದಿದ್ದರೂ ಆತಂಕ ಮಾತ್ರ ದೂರವಾಗಿಲ್ಲ. ಈ ಹಿನ್ನೆಲೆ ಕೊರೊನಾ ರೋಗಕ್ಕೆ ಲಸಿಕೆ ಬರುವ ಸಾಧ್ಯತೆ ಇದ್ದು, ಬಾಗಲಕೋಟೆ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಲಸಿಕೆ ಸಂಗ್ರಹಿಸಿಡುವ ಸಂಸ್ಕರಣಾ ಘಟಕಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕೊರೊನಾ ಲಸಿಕೆ ಸಂಗ್ರಹಕ್ಕೆ ಸಿದ್ಧವಾದ ಜಿಲ್ಲಾ ಆರೋಗ್ಯ ಇಲಾಖೆ ರಾಜ್ಯ ಸರ್ಕಾರ ಕೇಳಿದ ಮಾಹಿತಿಯ ಪ್ರಕಾರ ಈಗಾಗಲೇ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತರು ಹಾಗೂ ನರ್ಸ್ಗಳು ಸೇರಿದಂತೆ 600ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಯ ವೈದ್ಯರ, ಸಿಬ್ಬಂದಿಯ ಮಾಹಿತಿಯನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ. ಲಸಿಕೆ ಸಂಗ್ರಹಿಸುವ ನೂತನ ಘಟಕವನ್ನು ಸಹ ತಯಾರಿಸಲಾಗಿದೆ.
ಬಾಗಲಕೋಟೆಯು ಮಧ್ಯ ಭಾಗದಲ್ಲಿರುವುದರಿಂದ ಪ್ರಮುಖ ಸಂಸ್ಕರಣಾ ಘಟಕವನ್ನು ಸರ್ಕಾರ ನಿರ್ಮಾಣ ಮಾಡಿದೆ. ಇಲ್ಲಿಂದ ವಿಜಯಪುರ, ಕೊಪ್ಪಳ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಯ 70 ಘಟಕಗಳಿಗೆ ಲಸಿಕೆ ರವಾನಿಸುವ ಕಾರ್ಯ ಈಗಾಗಲೇ ನಡೆದಿದೆ.
ಪೋಲಿಯೋ ಸೇರಿದಂತೆ ಇತರ ರೋಗ ನಿಯಂತ್ರಣ ಲಸಿಕೆಯನ್ನು ಇಲ್ಲಿಂದಲೇ ಕಳಿಸುವ ಯೋಜನೆ ಈಗಾಗಲೇ ಚಾಲನೆಯಲ್ಲಿ ಇದೆ. ಆದರೆ, ಕೊರೊನಾ ವೈರಸ್ಗೆ ಮುಂದಿನ ತಿಂಗಳು ಲಸಿಕೆ ಬರುವ ಸಾಧ್ಯತೆ ಇದೆ.
ಈ ಹಿನ್ನಲೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಡಾ. ಅನಿಲ ದೇಸಾಯಿ ತಿಳಿಸಿದ್ದಾರೆ.