ಬಾಗಲಕೋಟೆ: ತೆಂಗಿನ ಮರವನ್ನು ಹತ್ತುವುದೇ ಕಷ್ಟ. ಅಂತಹದ್ದರಲ್ಲಿ ಇಲ್ಲೊಬ್ಬ ವ್ಯಕ್ತಿ ತಲೆ ಕೆಳಗಾಗಿ ಕಲ್ಪವೃಕ್ಷವನ್ನು ಏರುವುದು ಅಚ್ಚರಿಗೆ ಮೂಡಿಸುತ್ತೆ. ಜಿಲ್ಲೆಯ ಜಮಖಂಡಿ ತಾಲೂಕಿನ ಮೈಗೂರು ಗ್ರಾಮದಲ್ಲಿ ತಲೆಕೆಳಗೆ ಮಾಡಿ ತೆಂಗಿನ ಮರವನ್ನು ಹತ್ತುವ ಈ ವಿಶೇಷ ವ್ಯಕ್ತಿ ಇದ್ದಾನೆ ತನ್ನ ಈ ಕೌಶಲ್ಯದ ಮೂಲಕ ಜನರ ಗಮನ ಸೆಳೆಯುವುದರ ಜೊತೆ ಬೆಕ್ಕಸ ಬೆರಗಾಗುವಂತೆ ಮಾಡಿದ್ದಾರೆ.
ಹೌದು, ಈ ಕಲೆಯನ್ನ ಕರಗತ ಮಾಡಿಕೊಂಡಿರುವ ವ್ಯಕ್ತಿಯ ಹೆಸರು ಬಾಬು ತೇರದಾಳ. ಇವರು ಕೇವಲ ಮರಗಳನ್ನ ಮಾತ್ರವಲ್ಲದೇ ವಿದ್ಯುತ್ ದೀಪದ ಕಂಬಗಳನ್ನ ಸಹ ತಲೆಕೆಳಗಾಗಿ ಹತ್ತುತ್ತಾರೆ. ಕಳೆದ ಐದು ವರ್ಷಗಳಿಂದ ಹೀಗೆ ತಲೆಕೆಳಗಾಗಿ ಮರಗಳು ಮತ್ತು ವಿದ್ಯುತ್ ದೀಪದ ಕಂಬಗಳನ್ನ ಏರುವುದನ್ನ ಅಭ್ಯಾಸ ಮಾಡಿಕೊಂಡಿದ್ದಾರೆ.
ಇವರು ಯಾವುದೇ ಸಲಕರಣೆಯ ಸಹಾಯವಿಲ್ಲದೇ ಸ್ಪೈಡರ್ ಮ್ಯಾನ್ ರೀತಿ ತೆಂಗಿನ ಮರವನ್ನು ಹತ್ತಿ ಕಾಯಿ ಕೀಳುತ್ತಾರೆ. ತೆಂಗಿನ ಮರಗಳು ಎಷ್ಟೇ ಎತ್ತರವಿದ್ದರೂ, ಇವರು ಅವುಗಳನ್ನ ತಲೆಕೆಳಗೆ ಅನಾಯಾಸವಾಗಿ ಏರುವುದನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಾರೆ.