ಕರ್ನಾಟಕ

karnataka

ETV Bharat / state

ಕೆರೂರು ಏತ ನೀರಾವರಿ ಯೋಜನೆಗೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ.. - ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

ಬಾದಾಮಿಯ ಉಗಲವಾಟ ಗ್ರಾಮದಲ್ಲಿ ಕೆರೂರು ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದರು..

CM Basavaraj bommai establishment of kerur irrigation project
ಕೆರೂರು ಏತ ನೀರಾವರಿ ಯೋಜನೆಗೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ

By

Published : Apr 23, 2022, 7:35 AM IST

ಬಾಗಲಕೋಟೆ :ರೈತರ, ನೆಲ-ಜಲ ವಿಚಾರದಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸುವ ಪರಂಪರೆ ಕರ್ನಾಟಕದಲ್ಲಿ ಇದೆ. ಅಭಿವೃದ್ಧಿ ಕಾರ್ಯಕ್ರಮಗಳು ನಿಗದಿತ ಅವಧಿಯಲ್ಲಿ ಆಗಬೇಕು. ಕೆರೂರು ಏತ ನೀರಾವರಿ ಯೋಜನೆಯ ಎರಡನೇ ಹಂತದ ಕಾಮಗಾರಿ ಅನುಮೋದನೆಗೂ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕೆರೂರು ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಿಎಂ ಬೊಮ್ಮಾಯಿ..

ನಿನ್ನೆ (ಶುಕ್ರವಾರ) ಬಾದಾಮಿಯ ಉಗಲವಾಟ ಗ್ರಾಮದಲ್ಲಿ ಕೆರೂರು ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಿಎಂ, ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಬಿಟ್ಟು ಹೋಗಿರುವ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶಕ್ಕೆ 528 ಕೋಟಿ ರೂ. ವೆಚ್ಚದಲ್ಲಿ ಕೆರೂರು ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ನೀರಾವರಿ ಯೋಜನೆಗಳಿಗೆ ದೂರದೃಷ್ಟಿ, ಬದ್ದತೆ ಹಾಗೂ ಎಲ್ಲರ ಸಹಕಾರ ಬೇಕು. ಸವಣೂರ ಏತ ನೀರಾವರಿ ಯೋಜನೆಗೆ ಸಿದ್ಧರಾಮಯ್ಯನವರು ಅಡಿಗಲ್ಲು ಹಾಕಿದರು. ಈಗ ಬಾದಾಮಿ ತಾಲೂಕಿನಲ್ಲಿ ಕೆರೂರು ಏತ ನೀರಾವರಿ ಯೋಜನೆಗೆ ನಾನು ಮುಖ್ಯಮಂತ್ರಿಯಾಗಿ ಅಡಿಗಲ್ಲು ಹಾಕಿದ್ದೇನೆ. ಪಕ್ಷ, ಪಂಗಡಗಳನ್ನು ನೋಡದೇ ಅಭಿವೃದ್ಧಿ ಕೆಲಸ ನಿರಂತರವಾಗಿ ಸಾಗಬೇಕು ಎಂದರು.

ಬೀಳಗಿ ಮತ್ತು ಬಾದಾಮಿ ತಾಲೂಕಿನ 40 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಹಸಿರು ಸೀರೆ ಉಡಿಸುವ ಕನಸು ಕಾಣುತ್ತಿದ್ದೇವೆ. ಆ ಕೆಲಸವಾಗುವವರೆಗೂ ನಾವು ವಿಶ್ರಮಿಸುವುದಿಲ್ಲ. ಕರ್ನಾಟಕದ ನೀರಾವರಿ ಯೋಜನೆಗಳು ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ನಡುವೆ ಸಿಲುಕಿದೆ. ಅಂತಾರಾಜ್ಯ ನದಿ ವಿವಾದಗಳಿಂದ ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಆದಾಗ್ಯೂ ಕೂಡ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 1 ಮತ್ತು 2 ಈಗಾಗಲೇ ಪೂರ್ಣಗೊಂಡಿದೆ. ಹಂತ 3 ಯೋಜನೆಗಳಡಿ ಮೂಲಸೌಕರ್ಯಕ್ಕೆ ಅಗತ್ಯವಿರುವ ಕೆಲಸವನ್ನು ಮಾಡಲಾಗಿದೆ.

2009ರಲ್ಲಿ ಜಲಸಂಪನ್ಮೂಲ ಸಚಿವನಾಗಿದ್ದ ಸಂದರ್ಭದಲ್ಲಿ ಮುಳವಾಡ, ಗುತ್ತಿ ಬಸವಣ್ಣ, ಚಿಮ್ಮಲಗಿ ಏತನೀರಾವರಿ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಈಗ ಅದಕ್ಕೆ ನ್ಯಾಯಾಧಿಕರಣದ ಆದೇಶದಂತೆ ಅಧಿಸೂಚನೆ ಪಡೆದು ಯುಕೆಪಿ ಹಂತ-3 ಯೋಜನೆ ಆಗಬೇಕಾದರೆ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ ಮಟ್ಟ 524 ಮೀ.ವರೆಗೆ ಎತ್ತರಿಸಬೇಕು. ಅದಕ್ಕೆ ಸರ್ವ ಪ್ರಯತ್ನಗಳನ್ನು ನಾವು ಮಾಡುತ್ತಿದ್ದು, ಅನುಮತಿಯನ್ನು ಪಡೆದುಕೊಳ್ಳಲಾಗುವುದು ಎಂದರು.

ಮುಳುಗಡೆಯಾದ ಪ್ರದೇಶಕ್ಕೆ ಪರಿಹಾರ ನೀಡಿ, ಈ ಭಾಗದ ಬಹುದಿನಗಳ ಬೇಡಿಕೆಯಂತೆ 13 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದಂತಾಗುತ್ತದೆ. ಇಡೀ ಉತ್ತರ ಕನಾಟಕ ಭಾಗ್ಯದ ಬಾಗಿಲು ತೆರೆಯುತ್ತದೆ. ಆ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ನಿರಂತರವಾಗಿ ಇರುತ್ತದೆ. ಅದು ನಮ್ಮ ಬದ್ಧತೆ. ಜಲಸಂಪನ್ಮೂಲ ಸಚಿವ ಕಾರಜೋಳ ಅವರು ಈ ಯೋಜನೆಗಳಿಗೆ ವೇಗ ನೀಡಲು ಕಾರಣೀಭೂತರಾಗಿದ್ದಾರೆ. ಸಚಿವ ನಿರಾಣಿಯವರೂ ಸಹ ಒತ್ತಾಯ ಮಾಡಿ ಯೋಜನೆಗಳ ಅನುಮೋದನೆಗೆ ಕಾರಣರಾಗಿದ್ದಾರೆ. ಬರುವ ದಿನಗಳಲ್ಲಿ ನೀರಾವರಿಯ ಹಲವು ಯೋಜನೆಗಳಿಗೆ ಆದ್ಯತೆಯ ಮೇರೆಗೆ ಒತ್ತು ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.

ಬಾದಾಮಿ ಕ್ಷೇತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮಕ್ಕೆ ಪ್ರಸಿದ್ಧವಾಗಿದೆ. ಇದರ ಬೆಳವಣಿಗೆಯ ಅವಶ್ಯಕತೆ ಇದೆ. ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಇನ್ನಷ್ಟು ಅಭಿವೃದ್ಧಿ ಮಾಡಲು ನವೀಕೃತ ಮಾಸ್ಟರ್ ಪ್ಲಾನ್ ರೂಪಿಸಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಸಿಎಂ ತಿಳಿಸಿದರು.

ಸಮಾರಂಭ ಅಧ್ಯಕ್ಷತೆ ವಹಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ನೀರಾವರಿ ಯೋಜನೆಯಿಂದಾಗಿ ರೈತರಿಗೆ ಅನುಕೂಲವಾಗಲಿದೆ. ಶೀಘ್ರವಾಗಿ ಕಾರ್ಯ ಮುಗಿಸಿ ಯೋಜನೆಗೆ ಚಾಲನೆ ನೀಡಿ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಯಿ ಅವರಿಗೆ ಈ ಯೋಜನೆ ಮಾಡಿರುವುದಕ್ಕೆ ಧನ್ಯವಾದಗಳು ಎಂದು ಹೇಳಿದರು.

ಇದನ್ನೂ ಓದಿ:'ಕೌಶಲ್ಯ ರಥ'ಕ್ಕೆ ಸಿಎಂ ಬೊಮ್ಮಾಯಿ ಚಾಲನೆ: 2.5 ಲಕ್ಷ ಯುವ ಜನತೆಗೆ ತರಬೇತಿ‌ ನೀಡುವ ಗುರಿ

ABOUT THE AUTHOR

...view details