ಬಾಗಲಕೋಟೆ: ಬಸ್ ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹುನಗುಂದ ತಾಲೂಕಿನ ಮರೋಳ ಗ್ರಾಮದಲ್ಲಿ ನಡೆದಿದೆ.
ಬಸ್ ನಿಲ್ಲಿಸಿ ನುಗ್ಗಿದ ದುಷ್ಕರ್ಮಿಗಳು, ಕಂಡಕ್ಟರ್ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದಾರೆ. ಬಸ್ ಕಂಡಕ್ಟರ್ ಮುರುಗೇಶ ಹುಲ್ಲಳ್ಳಿ ಹಲ್ಲೆಗೆ ಒಳಗಾಗಿದ್ದು, ಗಂಭೀರ ಗಾಯಗೊಂಡ ಹಿನ್ನೆಲೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ ಕಂಡಕ್ಟರ್ ಕಣ್ಣಿಗೆ ಖಾರದ ಪುಡಿ ಎರಚಿ ಮಾರಣಾಂತಿಕ ಹಲ್ಲೆ ಹುನಗುಂದದಿಂದ ಇಂದವಾರ ಗ್ರಾಮಕ್ಕೆ ಬಸ್ ಹೊರಟಿತ್ತು. ಬಸ್ಅನ್ನು ಮರೋಳ ಬಳಿ ದುಷ್ಕರ್ಮಿಗಳು ನಿಲ್ಲಿಸಿ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಒಳಗಾದ ಕಂಡಕ್ಟರ್ ಮರೋಳ ಗ್ರಾಮದವರಾಗಿದ್ದು, ಹಲ್ಲೆ ಮಾಡಿದವರು ಅದೇ ಗ್ರಾಮದವರು ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಹಲ್ಲೆಗೆ ರಾಜಕೀಯ ವೈಷಮ್ಯ ಕಾರಣ ಎನ್ನಲಾಗ್ತಿದೆ. ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಬೆಂಬಲಿಗರಿಂದ ಹಲ್ಲೆ ಆಗಿದೆ ಅಂತಾ ಕಂಡಕ್ಟರ್ ಕುಟುಂಬದವರು ಆರೋಪಿಸಿದ್ದಾರೆ.
ಮರೋಳ ಗ್ರಾಮದ ಬಿಜೆಪಿ ಮುಖಂಡ ಅಶೋಕ ಬಂಡರಗಲ್ಲ ಕುಟುಂಬದವರು ಹಾಗೂ ಸಹಪಾಠಿಗಳಿಂದ ಹಲ್ಲೆ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಶಾಸಕರ ಬೆಂಬಲ ಅಶೋಕ ಬಂಡರಗಲ್ಲಗೆ ಇದೆ. ಕಂಡಕ್ಟರ್ ಮನೆಯವರು ಕಾಂಗ್ರೆಸ್ ಬೆಂಬಲಿಗರೆಂದು ಕಂಡಕ್ಟರ್ ಸಂಬಂಧಿ ಮಲ್ಲಿಕಾರ್ಜುನ ಹುಲ್ಲಳ್ಳಿ ಹೇಳಿಕೆ ನೀಡಿದ್ದಾರೆ. ಸ್ಥಳಕ್ಕೆ ಹುನಗುಂದ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಈ ಘಟನೆ ಕುರಿತು ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.