ಬಾಗಲಕೋಟೆ:ಹುನಗುಂದ ತಾಲೂಕಿನ ಮರೋಳ ಗ್ರಾಮದ ಬಳಿ ಬಸ್ ಕಂಡಕ್ಟರ್ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆಯ ವಿಡಿಯೋ ವೈರಲ್ ಆಗಿದೆ.
ಫೆಬ್ರವರಿ 4 ರ ಸಂಜೆ ಈ ಘಟನೆ ನಡೆದಿದ್ದು, ಬಸ್ಸನ್ನು ತಡೆದು ನಿಲ್ಲಿಸಿ ನುಗ್ಗಿದ ದುಷ್ಕರ್ಮಿಗಳು ಕಂಡಕ್ಟರ್ ಕಣ್ಣಿಗೆ ಖಾರಪುಡಿ ಎರಚಿ ಹಲ್ಲೆ ಮಾಡುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಮುರುಗೇಶ ಹುಲ್ಲಳ್ಳಿ ಎಂಬ ಬಸ್ ಕಂಡಕ್ಟರ್ನನ್ನು ಯುವಕರು ಮಾರಕಾಸ್ತ್ರಗಳಿಂದ ಥಳಿಸಿದ್ದು, ಈ ಸಮಯದಲ್ಲಿ ಯಾರೂ ಸಹಾಯಕ್ಕೆ ಬಂದಿಲ್ಲ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಕಾರಣ ಜಿಲ್ಲೆಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕಂಡಕ್ಟರ್ ಕಣ್ಣಿಗೆ ಖಾರಪುಡಿ ಎರಚಿ ಹಲ್ಲೆ ನಡೆಸಿದ ದುಷ್ಕರ್ಮಿಗಳು ಹುನಗುಂದದಿಂದ ಇಂದವಾರ ಗ್ರಾಮಕ್ಕೆ ಹೊರಟಿದ್ದ ಬಸ್‌ನ್ನು ಮರೋಳ ಬಳಿ ರಸ್ತೆಗೆ ಅಡ್ಡ ಬಂದ ದುಷ್ಕರ್ಮಿಗಳು ತಡೆದಿದ್ದಾರೆ. ಬಸ್ ನಿಂತ ತಕ್ಷಣ ಏಕಾಏಕಿ ಹಲ್ಲೆ ನಡೆಸಿದ ಐದಾರು ಜನರಿದ್ದ ಯುವಕರ ಗುಂಪು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ.
ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಲ್ಲಿಯವರೆಗೆ ಮೂವರನ್ನು ಬಂಧಿಸಲಾಗಿದೆ.