ಬಾಗಲಕೋಟೆ: ಶಿಕ್ಷಕ ಮನಸ್ಸು ಮಾಡಿದ್ರೆ ಹೆಚ್ಚಿನ ಸುಧಾರಣೆ ಮಾಡಿ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬಹುದು ಎಂಬುದಕ್ಕೆ ಜಿಲ್ಲೆಯ ಇಲಕಲ್ಲ ತಾಲೂಕಿನ ಚಿಕನಾಳ ಗ್ರಾಮದ ಶಾಲೆ ಸಾಕ್ಷಿಯಾಗಿದೆ.
ಹೌದು, ಚಿಕನಾಳ ಗ್ರಾಮದ ಪ್ರಾಥಮಿಕ ಶಾಲೆಯು ಖಾಸಗಿ ಶಾಲೆಗಿಂತ ಕಮ್ಮಿಇಲ್ಲ. ಇಲ್ಲಿನ ಶಿಕ್ಷಕರ ಉತ್ಸಾಹ ಹಾಗೂ ಮಕ್ಕಳಿಗೆ ಜ್ಞಾನ ಹೆಚ್ಚಿಸಬೇಕೆಂಬ ಹಂಬಲದಿಂದ ಇಂದು ಶಾಲೆಯು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.
ಸಿಸಿ ಕ್ಯಾಮರಾ ಅಳವಡಿಕೆ:
ಚಿಕನಾಳ ಪ್ರಾಥಮಿಕ ಶಾಲೆಯನ್ನು 1948 ರಲ್ಲಿ ಪ್ರಾರಂಭಿಸಲಾಯಿತು. 2007 ರಲ್ಲಿ 8 ನೇ ತರಗತಿ ಪ್ರಾರಂಭಿಸಲಾಗಿದೆ. ವಿಶೇಷ ಅಂದ್ರೆ, ಈ ಶಾಲೆಯ ಆಟದ ಮೈದಾನ ಕಲ್ಲು-ಮಣ್ಣುಗಳಿಂದ ಕೂಡಿತ್ತು. ಗ್ರಾಮ ಪಂಚಾಯತ್ ಎನ್.ಆರ್.ಇ.ಜಿ ಯೋಜನೆ ಅಡಿಯಲ್ಲಿ ಅಂದಾಜು 2.50 ಲಕ್ಷ ವೆಚ್ಚದಲ್ಲಿ ಗುಣಮಟ್ಟದ ಶಾಲಾ ಮೈದಾನ ನಿರ್ಮಿಸಲಾಗಿದೆ. ಎಸ್ ಆರ್ ಎನ್ ಇ ಫೌಂಡೇಶನ ವತಿಯಿಂದ ಸುಮಾರು 2 ಲಕ್ಷ ರೂ. ದೇಣಿಯಲ್ಲಿ ದ ರಾ ಬೇಂದ್ರೆ ಸಾಂಸ್ಕೃತಿಕ ವೇದಿಕೆ ನಿರ್ಮಾಣ ಮಾಡಲಾಗಿದೆ. ಗ್ರಾಮ ಪಂಚಾಯತ್ ಸದಸ್ಯರು ಶಾಲಾ ಸ್ವಚ್ಛತಾ ಮತ್ತು ಶಿಸ್ತಿಗಾಗಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಶಿಕ್ಷಕರು ತಮ್ಮ ಸ್ವಂತ ವೆಚ್ಚದಲ್ಲಿ ಶಾಲಾ ಗೋಡೆಗಳ ಮೇಲೆ ಬಗೆ ಬಗೆಯ ಚಿತ್ರಗಳನ್ನು ಬಿಡಿಸಿ, ವಿದ್ಯಾರ್ಥಿಗಳನ್ನು ಆಕರ್ಷಿಸುವಂತೆ ಮಾಡಿದ್ದಾರೆ. ಇದರ ಜೊತೆಗೆ ಯುಪಿಎಸ್ ಸಹ ಅಳವಡಿಸಿಕೊಂಡು ವಿದ್ಯುತ್ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಸ್ಮಾರ್ಟ್ ಕ್ಲಾಸ್ ಹಾಗೂ ವಿಡಿಯೋ, ಆಡಿಯೋ ಮೂಲಕ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟದ ಹೆಚ್ಚಿಸಿದ್ದಾರೆ.
ಖಾಸಗಿ ಶಾಲೆಗೆ ಸೆಡ್ಡು ಹೊಡೆದ ಸರ್ಕಾರಿ ಶಾಲೆ ಜಿಲ್ಲಾ ಪಂಚಾಯತ್ ವತಿಯಿಂದ ಶಾಲೆಗೆ ಬೋರ್ವೆಲ್ ಹಾಕಿಸಿಕೊಂಡು, ಗ್ರಾಮ ಪಂಚಾಯತ್ನ 4.30 ಲಕ್ಷ ಅನುದಾನದಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸುತ್ತಿದ್ದಾರೆ. ನರೇಗಾ ಯೋಜನೆ ಅಡಿಯಲ್ಲಿ ಶಾಲಾ ಕಂಪೌಂಡ್ ಎತ್ತರಕ್ಕೆ 8 ಲಕ್ಷ ಅನುದಾನ ಮಂಜೂರಾತಿ ಸಿಕ್ಕಿದೆ. ಹೀಗೆ ಎಲ್ಲಾ ಸೌಲಭ್ಯ ಹೊಂದಿರುವ ಹಿನ್ನೆಲೆ (ಸಿಸ್ಲೆಪ್) ರಾಜ್ಯ ಶಾಲಾ ನಾಯಕತ್ವ, ಶೈಕ್ಷಣಿಕ ಯೋಜನೆ ಹಾಗೂ ನಿರ್ವಹಣಾ ಸಂಸ್ಥೆ ಯು 'ಅತ್ಯುತ್ತಮ ಶಾಲೆ' ಎಂದು ಆಯ್ಕೆಯಾಗಿದೆ.
ಶಿಕ್ಷಕರಿಗೊಂದು ಸಲಾಂ:
ಇಲ್ಲಿ ಕಲಿತಿರುವ ವಿದ್ಯಾರ್ಥಿಗಳು, ಎಂಬಿಬಿಎಸ್, ಸೇನೆ ಸೇರಿದಂತೆ ಉನ್ನತ ಶಿಕ್ಷಣಕ್ಕೆ ಆಯ್ಕೆಯಾಗಿ ಅಧ್ಯಯನ ನಡೆಸುತ್ತಿದ್ದಾರೆ. ಇಲ್ಲಿನ ಪ್ರಭಾರಿ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಸೇರಿಕೊಂಡು ಸರ್ಕಾರಿ ಶಾಲೆ ಕೂಡ ಯಾವುದೇ ಇಂಗ್ಲಿಷ್ ಶಾಲೆಗೆ ಕಡಿಮೆ ಇಲ್ಲಾ ಎಂದು ತೋರಿಸಿಕೊಟ್ಟಿದ್ದಾರೆ. ಹೀಗೆ ಶಾಲೆ ಅಭಿವೃದ್ಧಿ ಪಡಿಸಿದ ಶಿಕ್ಷಕರ ತಂಡಕ್ಕೆ ಶಿಕ್ಷಕರ ದಿನಾಚರಣೆ ಅಂಗವಾಗಿ ನಮ್ಮದೊಂದು ಸಲಾಂ.