ಬಾಗಲಕೋಟೆ: ಕಾಂಗ್ರೆಸ್ ಸರ್ಕಾರ ಹೇಗಿದೆ ಎಂದರೆ, ಹಿಂದೆ ಒಬ್ಬ ಶ್ರೀಮಂತ ಇದ್ದನಂತೆ, ಏನಾದರೂ ಕೇಳೋಕೆ ಹೋದರೆ ದೇತಾ ಹುಂ ಅಂತಿದ್ದರು. ನಂತರ ಒಂದು ತಿಂಗಳ ಬಳಿಕ ದಿಲಾತಾ ಹುಂ ಎಂದು, ಇನ್ನೆರಡು ತಿಂಗಳ ಬಿಟ್ಟು ಹೋದರೆ ದೇನೆವಾಲೊ ಕೊ ದಿಖಾತಾ ಹುಂ ಅಂತಾರೆ. ಇಂತಹ ರಾಜಕಾರಣ ಈಗ ನಡೆಯುತ್ತಿದೆ. ಜನರು ಎಚ್ಚರದಿಂದ ಇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ವ್ಯಂಗ್ಯವಾಡಿದರು.
ಅವರು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಪರ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಬಹಿರಂಗ ವೇದಿಕೆಯಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷದ ಸರ್ಕಾರ ಕೇವಲ ಭರವಸೆ ನೀಡುತ್ತಾ ಹೋಗುತ್ತದೆ. ಈಗ ಗ್ಯಾರಂಟಿ ಕಾರ್ಡ್ ಮಾಡಿದ್ದಾರೆ. ಆದರೆ, ನಾವು ಮಾಡಿರುವ ಕೆಲಸ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದರು.
ಇದೇ ಸಮಯದಲ್ಲಿ ಮಾತನಾಡಿದ ಅವರು, ತೇರದಾಳ ಮತಕ್ಷೇತ್ರದ ಬಹು ದಿನಗಳ ಬೇಡಿಕೆಯಾದ ಸಸಾಲಟ್ಟಿ ಶಿವಲಿಂಗೇಶ್ವರ ಏತ ನೀರಾವರಿ ಯೋಜನೆಯಿಂದ 33 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದ ಮುಖ್ಯಮಂತ್ರಿ ಅವರು ಒಟ್ಟು 475 ಕೋಟಿ ರೂ.ಗಳ ವೆಚ್ಚದಲ್ಲಿ ಈ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಇದರಿಂದ ತೇರದಾಳ ಕ್ಷೇತ್ರದ 11 ಗ್ರಾಮಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಈ ಕಾರ್ಯ ಕೂಡಲೇ ಕಾರ್ಯಗತಗೊಂಡು ಜಮೀನುಗಳಿಗೆ ನೀರು ದೊರೆಯುವಂತಾಗಬೇಕು ಎಂದರು.
ಈ ಯೋಜನೆಯಿಂದ ಈ ಭಾಗದ ಜಮೀನಿಗೆ ನೀರು ದೊರೆತಾಗ ಭೂಮಿತಾಯಿ ಹಸಿರು ಸೀರೆ ಉಟ್ಟಾಗ ಸಂಪತ್ತು ಬರಿತವಾದ ನಾಡು ಆಗುತ್ತದೆ. ಆಗ ಭೂಮಿ ತಾಯಿ ಬಂಗಾರದ ಬೆಳೆ ಕೊಡುತ್ತಾಳೆ. ಇದರಿಂದ ಆರ್ಥಿಕ ಅಭಿವೃದ್ದಿ ಹೊಂದಲು ಸಾಧ್ಯ. ಈ ಭಾಗದ ಸಮಗ್ರ ಅಭಿವೃದ್ದಿಗಾಗಿ ನೀರಾವರಿ ಕ್ಷೇತ್ರಕ್ಕೆ ಕಾಯಕಲ್ಪ ನೀಡಲು ಹತ್ತು ಹಲವು ರೂಪಿಸಲಾಗಿದೆ. ಈ ಹಿಂದೆ ನೀರಾವರಿ ಸಚಿವರಾದಾಗ ಮುಳವಾಡ ಏತ ನೀರಾವರಿ, ಚಿಮ್ಮಡ ಏತ ನೀರಾವರಿ, ಗುತ್ತಿ ಬಸವಣ್ಣ ನೀರಾವರಿ ಯೋಜನೆ ನೆನಗುದಿಗೆ ಬಿದ್ದಿದ್ದವು. ಅವುಗಳಿಗಳಿಗೆ ಕಾಯಕಲ್ಪ ನೀಡಲಾಗಿದೆ ಎಂದರು. ನಮ್ಮ ಸರ್ಕಾರ ರೈತರಿಗೆ, ನೇಕಾರರರಿಗೆ ಸೇರಿದಂತೆ ಎಲ್ಲರಿಗೂ ಅನುಕೂಲ ಮಾಡಿದೆ. ನೇಕಾರ ಸನ್ಮಾನ ಯೋಜನೆಯಲ್ಲಿ ನೇಕಾರರ ಆರ್ಥಿಕ ಅಭಿವೃದ್ಧಿಗಾಗಿ ಯೋಜನೆ ಜಾರಿ ಮಾಡಲಾಗಿದೆ ಎಂದರು.