ಬಾಗಲಕೋಟೆ:ಕೋವಿಡ್-19 ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಇದೇ ಪ್ರಥಮ ಭಾರಿಗೆ ಜಿಲ್ಲೆಯಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ ಕಡಲೆಕಾಳು ವಿತರಣೆ ಮಾಡಲಾಗುತ್ತಿದೆ. ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಮತ್ತು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಒಟ್ಟಿಗೆ ಈ ಪಡಿತರವನ್ನು ವಿತರಿಸಲಾಗುತ್ತಿದೆ.
ಮೊದಲ ಬಾರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಕಡಲೆಕಾಳು ವಿತರಣೆ ಅಂತ್ಯೋದಯ ಕಾರ್ಡುದಾರರಿಗೆ ಎನ್‍ಎಫ್‍ಎಸ್‍ಎ ಅಡಿ ಪ್ರತಿ ಪಡಿತರ ಚೀಟಿಗೆ 35 ಕೆಜಿ ಅಕ್ಕಿ, ಪಿಎಂಜಿಕೆಎವೈ ಅಡಿ ಪ್ರತಿ ಯುನಿಟ್ಗೆ 5 ಕೆಜಿ ಅಕ್ಕಿ, ಪ್ರತಿ ಪಡಿತರ ಚೀಟಿಗೆ 1 ಕೆಜಿ ಕಡಲೆಕಾಳು ಉಚಿತವಾಗಿ ನೀಡಲಾಗುತ್ತದೆ. ಬಿಪಿಎಲ್ ಚೀಟಿದಾರರಿಗೆ ಎನ್‍ಎಫ್‍ಎಸ್‍ಎ ಅಡಿ ಪ್ರತಿ ಯುನಿಟ್ಗೆ 5 ಕೆಜಿ ಅಕ್ಕಿ, 2 ಕೆಜಿ ಗೋಧಿ ಮತ್ತು ಪಿಎಂಜಿಕೆಎವೈ ಅಡಿ ಪ್ರತಿ ಯೂನಿಟ್ಗೆ ಕೆಜಿ ಅಕ್ಕಿ, ಪ್ರತಿ ಪಡಿತರ ಚೀಟಿಗೆ 1 ಕೆಜಿ ಕಡಲೆಕಾಳನ್ನು ಉಚಿತವಾಗಿ ನೀಡಲಾಗುತ್ತದೆ.
ಎಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ಕೆಜಿಗೆ 15 ರೂ.ಗಳಂತೆ ಏಕ ಸದಸ್ಯತ್ವಕ್ಕೆ 5 ಕೆಜಿ ಅಕ್ಕಿ, 2 ಮತ್ತು ಹೆಚ್ಚಿನ ಸದಸ್ಯರಿರುವ ಚೀಟಿಗೆ 10 ಕೆಜಿ ಅಕ್ಕಿ ನೀಡಲಾಗುತ್ತದೆ. ಗ್ರಾಮೀಣ ಭಾಗದ ಅನಿಲರಹಿತ ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಚೀಟಿದಾರರಿಗೆ 3 ಲೀ. ಸೀಮೆ ಎಣ್ಣೆ ಹಾಗೂ ಒಪ್ಪಿಗೆ ನೀಡಿದ ಗ್ಯಾಸ್ ಪಡಿತರ ಚೀಟಿಗೆ 1 ಲೀ. ಸೀಮೆ ಎಣ್ಣೆ ವಿತರಿಸಲಾಗುತ್ತದೆ. ಅಂತಾರಾಜ್ಯ, ಅಂತರ್ ಜಿಲ್ಲೆ ಪೋರ್ಟಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ವರ್ಗದ ಪಡಿತರ ಚೀಟಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಪಡಿತರವನ್ನು ಆಧಾರ ಆಧಾರಿತ ಮೊಬೈಲ್ ಓಟಿಪಿ ಅಥವಾ ಬಯೋಮೆಟ್ರಿಕ್ ನೀಡಿ ಪಡೆಯಬಹುದಾಗಿದೆ. ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆವರೆಗೆ ತಿಂಗಳ ಅಂತ್ಯದವರೆಗೆ ಪಡಿತರ ವಿತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆಹಾರ ಇಲಾಖೆಯ ಉಪ ನಿರ್ದೇಶಕರಾದ ಶ್ರೀಶೈಲ ಕಂಕಣವಾಡಿ ತಿಳಿಸಿದ್ದಾರೆ.
ಮೊದಲ ಬಾರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಕಡಲೆಕಾಳು ವಿತರಣೆ ಪಡಿತರ ಪಡೆಯಲು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಂತು ಪಡೆಯಬೇಕು. ಪಡಿತರ ವಿತರಣೆಯಲ್ಲಿ ಯಾವುದೇ ದೂರುಗಳು ಇದ್ದಲ್ಲಿ ಆಯಾ ತಾಲೂಕಿನ ತಹಶೀಲ್ದಾರ್ ಕಚೇರಿಯ ಆಹಾರ ಶಾಖೆ ಅಥವಾ ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ್ ಕಂಕಣವಾಡಿ ಅವರಿಗೆ ಸಲ್ಲಿಸುವಂತೆ ಇಲ್ಲಿನ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.