ಬಾಗಲಕೋಟೆ: ನಗರದ ಎಸ್ಎಸ್ಕೆ ಸಮಾಜದ ವತಿಯಿಂದ ಪ್ರತಿ ವರ್ಷ ನಡೆಯುವ ದಸರಾ ಹಬ್ಬದ ನಿಮಿತ್ತ ನಡೆಯುವ ಛಪ್ಪನ್ ಭೋಜ್ ಈ ವರ್ಷವು ಅಂಬಾಭವಾನಿ ದೇವಾಲಯದಲ್ಲಿ ಅದ್ದೂರಿಯಾಗಿ ನೆರವೇರಿಸಲಾಯಿತು. 56 ವಿವಿಧ ಬಗೆಯ ತಿಂಡಿ - ತಿನಿಸು, ಆಹಾರ ಪದಾರ್ಥಗಳು, ಹಣ್ಣು ಹಂಪಲು ಹಾಗೂ ಡ್ರೈ ಪ್ರುಟ್ಸ್ ಹಾಕಿ ನೈವೇದ್ಯ ಮಾಡುವುದು ವಿಶೇಷವಾಗಿದೆ.
ಸಾಮೂಹಿಕ ಪ್ರಾರ್ಥನೆ: ದಸರಾ ಹಿನ್ನೆಲೆಯಲ್ಲಿ ನಡೆಯುವ ಛಪ್ಪನ್ ಭೋಜ್ಗಾಗಿ ದೇಶ - ವಿದೇಶಗಳಿಂದಲೂ ಭಕ್ತರು ತಿಂಡಿ ತಿನಿಸುಗಳನ್ನು ದೇವಿಗೆ ನೈವೇದ್ಯಕ್ಕಾಗಿ ಕಳುಹಿಸುತ್ತಾರೆ. ಅಮೆರಿಕದಲ್ಲಿ ಇರುವ ಇಲ್ಲಿನ ಭಕ್ತರು, ವಿದೇಶದಿಂದಲೇ ಸಿಹಿ ತಿಂಡಿ ಪದಾರ್ಥಗಳನ್ನು ಕಳುಹಿಸಿ ಕೊಡುತ್ತಾರೆ. ದಸರಾ ಹಬ್ಬದ ಅಷ್ಟಮಿ ದಿನದಂದು ರಾತ್ರಿ ಸಮಯದಲ್ಲಿ ಎಲ್ಲ ಆಹಾರ ಪದಾರ್ಥಗಳನ್ನು ಒಂದೆಡೆ ಸೇರಿಸಿ, ದೇವಿಯ ಮುಂದೆ ಇಟ್ಟು ಸಾಮೂಹಿಕವಾಗಿ ಪ್ರಾರ್ಥನೆ ಮಾಡುತ್ತಾರೆ. ದೇವಿಯ ವಿವಿಧ ಬಗೆಯ ಮಂಗಳಾರತಿ ಹಾಡಿ, ಪ್ರಾರ್ಥನೆ ಸಲ್ಲಿಸುತ್ತಾರೆ.
ಮಂಗಳಾರತಿ ಮೂಲಕ ದೇವಿಗೆ ಪ್ರಾರ್ಥನೆ: ನಂತರ ಎಲ್ಲ ಆಹಾರ ಪದಾರ್ಥಗಳನ್ನು ಒಂದೆಡೆ ಸೇರಿಸಿ ಬಂದ ಭಕ್ತರಿಗೂ ಪ್ರಸಾದ ರೂಪದಲ್ಲಿ ಕೊಡುತ್ತಾರೆ. ಇತಿಹಾಸದ ಹಿನ್ನೆಲೆ ಇರುವ ಈ ಅಂಬಾಭವಾನಿ ದೇವಿಗೆ ಭಕ್ತರ ಸಂಕಷ್ಟ ದೂರು ಮಾಡಿ, ಸಕಲ ಸುಖ ಸಂತೋಷ ನೀಡುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಈ ಹಿನ್ನೆಲೆ ದಸರಾ ಸಮಯದಲ್ಲಿ ಒಂಬತ್ತು ದಿನಗಳ ಕಾಲ ಬೆಳಗಿನ ಜಾವ ಕಾಕಡಾರತಿ, ಸಂಜೆ ಮಂಗಳಾರತಿ ಮಾಡುವ ಮೂಲಕ ದೇವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ನಿತ್ಯ ಒಂದೊಂದು ಅಲಂಕಾರ ಮಾಡಿ, ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ.