ಬಾಗಲಕೋಟೆ : ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಪ್ರಕಾಶ ನೇತೃತ್ವದ ಕೇಂದ್ರ ತಂಡ ಜಿಲ್ಲೆಯ ನೆರೆ ಪ್ರದೇಶದಲ್ಲಿ ಸಂಚಾರ ಮಾಡಿ ಪರಿಶೀಲನೆ ನಡೆಸಿದರು.
ಪ್ರಕೃತಿ ವಿಕೋಪದಿಂದ ಹಾನಿಗೊಳಗಾಗಿರುವ ಜಿಲ್ಲೆಯ ವಸ್ತುಸ್ಥಿತಿ ಕುರಿತು ಅಧ್ಯಯನ ಮಾಡಲು ಆಗಮಿಸಿದ ತಂಡವು ಮೊದಲು ಜಮಖಂಡಿ ತಾಲೂಕಿನ ಚಿಕ್ಕ ಪಡಸಲಗಿ ಗ್ರಾಮದ ಬಳಿ ಹಾನಿ ಆಗಿರುವ ಸೇತುವೆಗೆ ಭೇಟಿ ನೀಡಿ ಹಾಳಾಗಿರುವ ಸೇತುವೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಪ್ರವಾಹದಿಂದ ತೊಂದರೆ ಆಗಿರುವ ಪ್ರದೇಶ ಬಗ್ಗೆ ಮಾಹಿತಿ ನೀಡಿದರು.
ನಂತರ ರಬಕವಿ-ಬನಹಟ್ಟಿ ತಾಲೂಕಿನ ಅಸ್ಕಿ ಗ್ರಾಮದಲ್ಲಿ ಸ್ಥಾಪಿಸಲಾದ ಪರಿಹಾರ ಕೇಂದ್ರ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಮಾಡಿ ಅವಲೋಕನ ಮಾಡಿದರು. ಈ ಸಂದರ್ಭದಲ್ಲಿ ಸಂತ್ರಸ್ತರ ಸಮಸ್ಯೆಯನ್ನು ಆಲಿಸಿದರು. ತದ ನಂತರ ಮುಧೋಳ ತಾಲೂಕಿನ ಯಾದವಾಡ ಹಾಗೂ ಚಿಕ್ಕಾಲಗುಂಡಿ ಬ್ಯಾರೇಜ್ ಹಾನಿ ವೀಕ್ಷಿಸಿದರು. ನಂತರ ಬಾಗಲಕೋಟೆ ತಾಲೂಕಿನ ಕಲಾದಗಿಗೆ ತೆರಳಿ ಬೆಳೆಹಾನಿ ಆಗಿರುವ ಬಗ್ಗೆ ರೈತರಿಂದ ಮಾಹಿತಿ ಪಡೆದುಕೊಂಡರು.
ಕೇಂದ್ರ ಪ್ರವಾಹ ಅಧ್ಯಯನ ತಂಡದಿಂದ ನೆರೆ ಪೀಡಿತ ಪ್ರದೇಶಗಳ ವೀಕ್ಷಣೆ.. ಕಬ್ಬು, ಮೆಕ್ಕೆಜೋಳ ಹಾಗೂ ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಸಪೋಟಾ ಸೇರಿದಂತೆ ಬೆಳೆಗಳ ಹಾನಿ ಆಗಿರುವ ಬಗ್ಗೆ ಮಾಹಿತಿ ಪಡೆದರು. ಬಾದಾಮಿ ತಾಲೂಕಿನ ನಂದಿಕೇಶ್ವರದಲ್ಲಿ ಬೆಳೆ, ರಸ್ತೆ ಹಾನಿ ಹಾಗೂ ಪಟ್ಟದ ಕಲ್ಲಿನಲ್ಲಿ ಮನೆ ಹಾನಿ ವೀಕ್ಷಣೆ ನಡೆಸಿದರು.
ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಪ್ರಕಾಶ ನೇತೃತ್ವದ ಕೇಂದ್ರ ಅಧ್ಯಯನ ತಂಡದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಲೆಕ್ಕಪತ್ರ ಶಾಖೆಯ ನಿರ್ದೇಶಕ ಎಸ್ ಸಿ ಮೀನಾ, ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪುಣ್ಣುಸ್ವಾಮಿ, ಕೇಂದ್ರ ಜಲಸಂಪನ್ಮೂಲದ ಬೆಂಗಳೂರಿನ ಪ್ರಾದೇಶಿಕ ಕಚೇರಿಯ ಎಸ್ ಇ ಜಿತೇಂದ್ರ ಪನವಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪ್ರಾದೇಶಿಕ ಕಚೇರಿಯ ವಿಜಯಕುಮಾರ, ಗ್ರಾಮೀಣಾಭಿವೃದ್ದಿ ಸಚಿವಾಲಯದ ಮಾಣಿಕ ಚಂದ್ರ ಪಂಡಿತ ಹಾಗೂ ಇಂಧನ ಸಚಿವಾಲಯದ ಉಪನಿರ್ದೇಶಕ ಓ ಪಿ ಸುಮನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.