ಬಾಗಲಕೋಟೆ:ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 72ನೇ ಗಣರಾಜ್ಯೋತ್ಸವ ಸಮಾರಂಭ ಜರುಗಿತು. ಜಿಲ್ಲಾ ಉಸ್ತುವಾರಿ ಸಚಿವ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳಿಂದ ಪಥಸಂಚಲನ ನಡೆಯಿತು.
ಈ ವೇಳೆ ಮಾತನಾಡಿದ ಕಾರಜೋಳ, ಪ್ರವಾಹ ಸಂದರ್ಭದಲ್ಲಿ ಹಾನಿಯಾಗಿರುವ ಮನೆಗಳಿಗೆ ಪರಿಹಾರ ಸೇರಿದಂತೆ ಇತರ ಸೌಲಭ್ಯಗಳಿಗಾಗಿ ಸರ್ಕಾರ 17 ಕೋಟಿ 70 ಲಕ್ಷ ಹಣವನ್ನು ನೇರವಾಗಿ ಸಂತ್ರಸ್ತರ ಖಾತೆಗೆ ಜಮಾ ಮಾಡಿದೆ ಎಂದರು.
ಬಾಗಲಕೋಟೆಯಲ್ಲಿ ಗಣರಾಜ್ಯೋತ್ಸವ ಸಮಾರಂಭ ಇದೇ ಸಮಯದಲ್ಲಿ ಮುಧೋಳ ಶ್ವಾನವನ್ನು ಪೊಲೀಸ್ ಇಲಾಖೆಗೆ ಸಚಿವರು ಹಸ್ತಾಂತರ ಮಾಡಿದರು. ಈ ಸಮಯದಲ್ಲಿ 2020ರಲ್ಲಿಯೇ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜರಾಗಿದ್ದ ಬಾಗಲಕೋಟೆಯ ಡಾ. ಅಶೋಕ ಸೊನ್ನದ ಪ್ರಶಸ್ತಿ ಸ್ವೀಕಾರ ಮಾಡಿರಲಿಲ್ಲ. ಹೀಗಾಗಿ ಪ್ರಶಸ್ತಿ ಫಲಕ ಹಾಗೂ ಇತರ ಸನ್ಮಾನ ಕಾರ್ಯಕ್ರಮ ನಡೆಯಿತು. ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು.
ಇನ್ನು ಕಳೆದ ಹಲವು ವರ್ಷಗಳಿಂದ ಉದ್ಘಾಟನೆ ಭಾಗ್ಯ ಕಾಣದ ಅಂಬೇಡ್ಕರ್ ಮೂರ್ತಿಯನ್ನು ಇಂದು ಗೋವಿಂದ ಕಾರಜೋಳ ಅನಾವರಣಗೊಳಿಸಿದರು. ಜನವರಿ 2ರಂದು ಅಂಬೇಡ್ಕರ್ ಪುತ್ಥಳಿ ಉದ್ಘಾಟನೆ ಮಾಡಬೇಕು ಎಂದು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿತ್ತು. ಆದರೆ ವಿವಿಧ ದಲಿತ ಸಂಘಟನೆಗಳ ವಿರೋಧ ಹಿನ್ನೆಲೆ ಅಪೂರ್ಣ ಕಾಮಗಾರಿಯಾಗಿದ್ದರಿಂದ ಸ್ಥಗಿತಗೊಳಿಸಲಾಗಿತ್ತು.
ಗಣರಾಜ್ಯೋತ್ಸವ ದಿನದ ಅಂಗವಾಗಿ ಚಾಲನೆ ನೀಡಬೇಕು ಎಂಬ ಉದ್ದೇಶದಿಂದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇಂದು ಲೋಕಾರ್ಪಣೆ ಮಾಡಲಾಯಿತು.