ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಮಾತನಾಡಿದರು ಬಾಗಲಕೋಟೆ: ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಮುಖ್ಯಮಂತ್ರಿ ಆಗುವುದಕ್ಕೆ ಲಡಾಯಿ ಶುರುವಾಗಿದೆ. ಸರ್ಕಾರ ಆಗುವುದು ಗ್ಯಾರೆಂಟಿ ಇಲ್ಲ ಆದರೆ ನಾ ಸಿಎಂ ಆಗುವೆ.. ನಾ ಸಿಎಂ ಆಗುವೆ. ಅಧಿಕಾರಕ್ಕಾಗಿ ಬಡಿದಾಡುತ್ತಿರುವ ಕಾಗ್ರೆಸ್ ನಾಯಕರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಜಮಖಂಡಿ ಪಟ್ಟಣದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಪ್ರಚಾರದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಳು ಜಗಳ ಮತ್ತು ಯಾವುದೇ ರೀತಿಯ ವೈಮನಸ್ಸು ಇಲ್ಲ. ಆದರೆ ತತ್ವ ಸಿದ್ಧಾಂತದಡಿ ಯೋಗ್ಯ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಲಾಗುವುದು ಎಂದು ಹೇಳುವ ಮೂಲಕ ಬಿಜೆಪಿಯಿಂದ ಮುಖ್ಯಮಂತ್ರಿ ಯಾರು ಆಗಬೇಕೆಂದು ನಡೆಯುತ್ತಿರುವ ಚರ್ಚೆಗೆ ಫುಲ್ ಸ್ಟಾಫ್ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತದೆ. ಭ್ರಷ್ಟಾಚಾರ ಕಾಂಗ್ರೆಸ್ ಉಸಿರಾಗಿದೆ. ಹಿಂದೆ ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಮಂತ್ರಿಗಳು ಸಿಲುಕಿ ಜೈಲು ಪಾಲು ಆಗುತ್ತಿದ್ದರು. ಆದರೆ ಆ ಜೈಲುಗಳು ಇಂದು ಖಾಲಿ ಹೊಡೆಯುತ್ತಿವೆ. ಕೇಂದ್ರದಲ್ಲಿ 9 ವರ್ಷದಿಂದ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿವೆ. ಆದರೆ ಇಲ್ಲಿಯವರೆಗೆ ಯಾವುದೇ ಕೇಂದ್ರ ಸಚಿವರ ಮೇಲೆ ಭ್ರಷ್ಟಾಚಾರದ ಆರೋಪ ಬಂದಿಲ್ಲ. ಇದು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮುಕ್ತವಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
2018ರಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಇದ್ದರೂ, ಬೇರೆಯವರು ಅಧಿಕಾರ ನಡೆಸಿದರು. ಆದರೆ ಈ ಸಲ 2023 ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಂದ ಬಹುಮತದ ಸರ್ಕಾರ ಆಯ್ಕೆ ಮಾಡಬೇಕಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯವಿದೆ ಎನ್ನುವುದನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಮನವಿ ಮಾಡಿದರು.
ಪ್ರಧಾನ ಮಂತ್ರಿ ಮೋದಿ ಸಾಕಷ್ಟು ಅಭಿವೃದ್ಧಿ ಮಾಡಿದ್ದು, ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಬಿಜೆಪಿ ಪಕ್ಷ ಹೇಳಿದ್ದನ್ನೂ ಮಾಡುತ್ತದೆ, ಮಾಡಿದ್ದನ್ನು ಹೇಳುತ್ತದೆ. ಬಿಜೆಪಿ ಸುಳ್ಳಿನ ಭರವಸೆ ನೀಡಲ್ಲ. ಬಿಜೆಪಿ ಭರವಸೆ ನೀಡಿದ್ದನ್ನು ಪೂರ್ಣಗೊಳಿಸುತ್ತದೆ ಎಂದು ಕೇಂದ್ರ ಸಚಿವರು ಹೇಳಿದ್ರು.
ರಾಮ ಮಂದಿರ ನಿರ್ಮಾಣ, ಭದ್ರಕಾಳಿ ದೇವಾಲಯ ನಿರ್ಮಾಣದ ಬಗ್ಗೆ ಹೇಳಿದ್ದೆವು. ಈಗ ಕಾಮಗಾರಿ ಪ್ರಾರಂಭವಾಗಿ, ಮುಕ್ತಾಯ ಹಂತಕ್ಕೆ ಬಂದಿದೆ. ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ಭಾರತ ದೇಶದಲ್ಲಿ ಸಿಗುವ ಸೌಲಭ್ಯ ನೆರೆಹೊರೆಯ ದೇಶಗಳಲ್ಲಿ ಸಿಗುತ್ತಿಲ್ಲ. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಸ್ತೆ, ರೈಲು, ವಿಮಾನ ನಿಲ್ದಾಣ ಆರಂಭಿಸಿ ಕರ್ನಾಟಕವನ್ನು ಅಭಿವೃದ್ಧಿ ಪಥದತ್ತ ಒಯ್ದಿದ್ದಾರೆ ಎಂದು ಬಣ್ಣಿಸಿದರು.
ಕೈಗಾರಿಕಾ ವಲಯ ಅಭಿವೃದ್ಧಿ ಪಡಿಸಲು ಮೇಕ್ ಇನ್ ಇಂಡಿಯಾ ಆರಂಭಿಸಿದರು. ಇದರಿಂದ ನಿರುದ್ಯೋಗ ನಿವಾರಣೆಯಾಗುತ್ತಿದೆ. ಮನೆಗೆ ಮನೆಗೆ ಕುಡಿಯುವ ನೀರು, ಭೂಮಿಗೆ ನೀರಾವರಿ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. 2g ನಂತರ ಈಗ 5g ಇಂಟರ್ನೆಟ್ ಸಂಪರ್ಕ ಜನರಿಗೆ ಸಿಗುತ್ತಿದೆ ಎಂದು ತಿಳಿಸಿದರು.
ಸುಡಾನ್ದಿಂದ ಭಾರತೀಯರು ಸುರಕ್ಷಿತವಾಗಿ ತಾಯ್ನಾಡಿಗೆ: ಸುಡಾನ್ ದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ಯಾವುದೇ ತೊಂದರೆ ಆಗದಂತೆ ತಾಯ್ನಾಡಿಗೆ ಭಾರತಕ್ಕೆ ಕರೆತರಲಾಗುತ್ತಿದೆ. ಇದು ಪ್ರಧಾನ ಮಂತ್ರಿ ಮೋದಿಯವರ ವರ್ಚಸ್ಸು, ವಿಶ್ವದಲ್ಲಿ ಭಾರತದ ತಾಕತ್ತು ಏನೂ ಎನ್ನುವುದನ್ನು ಪ್ರಧಾನಿ ತೋರಿಸುತ್ತಿದ್ದಾರೆ. ಆದರೆ ವಿನಾಕಾರಣ ಸುಳ್ಳು ಆರೋಪ ಮಾಡುವುದು ಕಾಂಗ್ರೆಸ್ ಪಕ್ಷದವರ ಕೆಲಸವಾಗಿದೆ ಎಂದು ರಾಜನಾಥ ಸಿಂಗ್ ಕಿಡಿಕಾರಿದರು.
ಇದನ್ನೂಓದಿ:ಕೇಂದ್ರದ ಯೋಜನೆಗಳಲ್ಲಿ ಮುಸಲ್ಮಾನರನ್ನು ಹೊರಗಿಟ್ಟಿದ್ದು ತೋರಿಸಿದರೆ ರಾಜಕೀಯ ನಿವೃತ್ತಿ: ರಾಜೀವ್ ಚಂದ್ರಶೇಖರ್ ಸವಾಲು