ಬಾಗಲಕೋಟೆ: ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಪ್ರಧಾನಿ ಮೋದಿ ವಿರುದ್ಧ ವೃಥಾ ಆರೋಪಗಳನ್ನು ಮಾಡ್ತಿವೆ. ರಾಜ್ಯದಲ್ಲಿ ಮೈತ್ರಿ ಪಕ್ಷ 6 ಸ್ಥಾನಗಳನ್ನಾದರೂ ಗೆದ್ದರೆ ನಾವು ಸನ್ಮಾನ ಮಾಡ್ತೀವಿ ಎಂದು ಬಿಜೆಪಿ ಮುಖಂಡ, ಶಾಸಕ ಗೋವಿಂದ ಕಾರಜೋಳ ಸವಾಲು ಹಾಕಿದರು.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ತಾನು ರಾಜಕೀಯ ನಿವೃತ್ತಿ ಹೊಂದುವುದಾಗಿ ಸಚಿವ ರೇವಣ್ಣ ಹೇಳಿರುವುದು ಹಾಸ್ಯಾಸ್ಪದ. ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತ. ಮೇ 23ರಂದು ರೇವಣ್ಣ ರಾಜಕೀಯ ಸನ್ಯಾಸತ್ಯ ಸ್ವೀಕರಿಸಲು ಸಿದ್ಧರಾಗಲಿ ಎಂದರು.
ಬಾಗಲಕೋಟೆಯಲ್ಲಿ ಮೈತ್ರಿ ಪಕ್ಷದ ಕಾಲೆಳೆದ ಶಾಸಕ ಗೋವಿಂದ ಕಾರಜೋಳ ರಾಜಕೀಯ ಅನುಭವ ಇಲ್ಲದ ರೇವಣ್ಣ ತಂದೆ ರಕ್ಷಾಕವಚದೊಳಗೆ ಇದ್ದವರು. ಯಾರೋ ಜ್ಯೋತಿಷಿ ದೇವೆಗೌಡರು ಪ್ರಧಾನಿಯಾಗ್ತಾರೆ ಎಂದು ಹೇಳಿರುವುದಕ್ಕೆ, ರೇವಣ್ಣ ಹೀಗೆ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಮೋದಿ ಸಾಧನೆಗಳನ್ನು ಕಂಡು ಕಾಂಗ್ರೆಸಿಗರು ಹೊಟ್ಟೆ ಉರಿದುಕೊಳ್ತಿದ್ದಾರೆ. ಅತ್ತ ರಾಹುಲ್, ಇತ್ತ ಸಿದ್ದರಾಮಯ್ಯ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ. ರಾಜ್ಯದಲ್ಲಿ ಅವರು 6 ಸ್ಥಾನಗಳಲ್ಲಾದರೂ ಗೆದ್ದರೆ ಖಂಡಿತ ನಾವೇ ಸನ್ಮಾನ ಮಾಡ್ತೀವಿ. ಜತೆಗೆ ರೇವಣ್ಣರಿಗೂ ಸನ್ಮಾನ ಮಾಡ್ತೀವಿ ಎಂದು ಕಾಲೆಳೆದರು.
ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಜನರ ಬಯಕೆ ಸ್ವಾತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು. ಖಂಡಿತ ರಾಜ್ಯದ 22 ಕ್ಷೇತ್ರಗಳಲ್ಲಿ ಗೆಲ್ತೀವಿ ಎಂದರು. ಸಿಎಂ ಇಬ್ರಾಹಿಂ, ಪ್ರಧಾನಿ ಮೋದಿ ಬಗ್ಗೆ ಕೀಳಾಗಿ ಮಾತಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಕುಟುಕಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದು ಸವದಿ ಮಾತನಾಡಿ, ಇದೇ ತಿಂಗಳ 18 ರಂದು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ವಿಜಯಪುರ- ಬಾಗಲಕೋಟೆ ಜಿಲ್ಲೆಯಿಂದ ಲಕ್ಷಾಂತರ ಜನರು ಆಗಮಿಸಲಿದ್ದಾರೆ ಎಂದು ತಿಳಿಸಿದರು.