ಬಾಗಲಕೋಟೆ : ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಬಿಜೆಪಿಯವರಿಗೆ ರಾಜಕೀಯ ಬಿಟ್ಟು ಬೇರೆ ಏನು ಕೆಲಸ ಇದೆ ಎಂದು ತೋಟಗಾರಿಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಪ್ರಶ್ನೆ ಮಾಡಿದರು. ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವರಿಗೆ ಈಗ ಮಾಡಲು ಬೇರೆ ಏನೂ ಕೆಲಸ ಇಲ್ಲ ಎಂದು ಟೀಕಿಸಿದರು. ಬಿಜೆಪಿ ಪ್ರತಿಭಟನೆ ಮಾಡಲು ನಿರ್ಧರಿಸಿದೆ ಎಂಬ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.
’’ಮೊದಲು ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತೇವೆ ಅಂದರು. ಬಳಿಕ ಕೊಡಲ್ಲ ಅಂದರು. ನಿಜವಾಗಿ ಕೇಂದ್ರ ಸರ್ಕಾರ ಅಕ್ಕಿ ಕೊಡಬೇಕಿತ್ತು. ಈ ಹಿಂದೆ ಆಹಾರ ನಿಗಮದವರು ಅಕ್ಕಿ ಕೊಡುವುದಾಗಿ, ಸರ್ಕಾರದ ಪತ್ರಕ್ಕೆ ಉತ್ತರ ಬರೆದಿದ್ದರು. ಬಳಿಕ ಮತ್ತೆರಡು ದಿನ ಕಳೆದು ಅಕ್ಕಿ ಇಲ್ಲ ಎಂದು ಪತ್ರ ಬರೆಯುತ್ತಾರೆ. ಕೇಂದ್ರ ಸರ್ಕಾರ ಅಕ್ಕಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ. ಇದರಲ್ಲಿ ಎರಡು ಮಾತಿಲ್ಲ ಎಂದು ಎಸ್ ಎಸ್ ಮಲ್ಲಿಕಾರ್ಜುನ್ ಹರಿಹಾಯ್ದರು.
ನಮ್ಮ ರಾಜ್ಯದಲ್ಲಿ 7 ಲಕ್ಷ ಟನ್ ಅಕ್ಕಿ ದಾಸ್ತಾನು ಇದೆ. ಅದನ್ನಾದರೂ ನಮಗೆ ಕೊಡಬಹುದಿತ್ತು. ಆದರೆ, ಅದನ್ನು ಕೊಡಲು ತಯಾರಿಲ್ಲ. ಹಾಗಾಗಿ ಅಕ್ಕಿ ಬದಲಿಗೆ ಜನರ ಖಾತೆಗೆ ಹಣವನ್ನು ಹಾಕುತ್ತಿದ್ದೇವೆ. ಒಟ್ಟು ಜನರಿಗೆ ನೀಡಿರುವ ಭರವಸೆಯನ್ನುಈಡೇರಿಸುತ್ತೇವೆ. ನಾವು ಯಾವೆಲ್ಲ ಗ್ಯಾರಂಟಿಗಳನ್ನು ನೀಡಿದ್ದೇವೆ ಅದನ್ನು ಖಂಡಿತವಾಗಿಯೂ ಈಡೇರಿಸುತ್ತೇವೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ :ನಾವು ಕೊಟ್ಟ 5 ಗ್ಯಾರಂಟಿಗಳ ಪೈಕಿ ಮೂರು ಈಡೇರಿದೆ: ದಿನೇಶ್ ಗುಂಡೂರಾವ್