ಬಾಗಲಕೋಟೆ: ನಗರದಲ್ಲಿ ರಾತ್ರೋರಾತ್ರಿ ಪ್ರತಿಷ್ಠಾಪನೆ ಮಾಡಲಾಗಿದ್ದ ಶಿವಾಜಿ ಮೂರ್ತಿ ತೆರವು ಮಾಡಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ನಾಳೆ ( ಶನಿವಾರ) ಬಾಗಲಕೋಟೆ ನಗರದಲ್ಲಿ ಬಂದ್ ಕರೆ ನೀಡಿವೆ. ಸೋನಾರ್ ಲೇಔಟ್ನಲ್ಲಿ ರಾತ್ರಿ ಪ್ರತಿಷ್ಠಾಪನೆ ಮಾಡಲಾಗಿದ್ದ ಶಿವಾಜಿ ಮೂರ್ತಿಯನ್ನು ಅನಧಿಕೃತ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ಆಗಸ್ಟ್ 16ರ ರಾತ್ರಿ ತೆರವುಗೊಳಿಸಿತ್ತು.
ಇದೀಗ ಶಿವಾಜಿ ಮೂರ್ತಿ ತೆರವಿನ ವಿಚಾರ ದಿನೇ ದಿನೇ ಕಾವು ಪಡೆದುಕೊಳುತ್ತಿದೆ. ಶಿವಾಜಿ ಮೂರ್ತಿ ತೆರವು ವಿಷಯವನ್ನೇ ಇದೀಗ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇವತ್ತು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಸಭೆ ನಡೆಸಿದ್ದವು. ಸಭೆಯಲ್ಲಿ ನಾಳೆ ಅಂದರೆ ಶನಿವಾರ ಆಗಸ್ಟ್19 ರಂದು ಬಾಗಲಕೋಟೆ ನಗರದಲ್ಲಿ ಸ್ವಯಂಘೋಷಿತ ಬಂದ್‌ಗೆ ಕರೆ ನೀಡಲಾಯಿತು. ಬಾಗಲಕೋಟೆಯ ಚರಂತಿಮಠ ಕಲ್ಯಾಣ ಮಂಟಪದಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಸಭೆ ಸೇರಿದ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಶಿವಾಜಿ ಮೂರ್ತಿ ಮರು ಪ್ರತಿಷ್ಠಾಪನೆ ಆಗೋವರೆಗೂ ಹೋರಾಟದ ಶಪಥ ಮಾಡಿದ್ದಾರೆ.