ಬಾಗಲಕೋಟೆ:ನಾನು ಬಿಜೆಪಿ ಪಕ್ಷದ ವಿರುದ್ಧವೂ ಅಲ್ಲ, ಕೇಂದ್ರ ಸರ್ಕಾರದ ವಿರೋಧಿಯೂ ಅಲ್ಲ, ಮುಖ್ಯಮಂತ್ರಿ ಕುಟುಂಬ ರಾಜಕಾರಣ ಹಾಗೂ ಅವರ ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.
ಕೂಡಲಸಂಗಮದಲ್ಲಿ ಪಂಚಮಸಾಲಿ ಸಮುದಾಯದ 2 ಎ ಮೀಸಲಾತಿಗಾಗಿ ಪಾದಯಾತ್ರೆಯ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಮುಖ್ಯಮಂತ್ರಿ ಯಡಿಯೂರಪ್ಪನವರ ಮನೆಯವರೇ ಸಿಡಿ ತಯಾರಿಸಿ, ಅವರೇ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಹೀಗಾಗಿ ಇಡೀ ಕುಟುಂಬ ಅಧಿಕಾರದಲ್ಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಳಿ ಆ ಸಿಡಿ ಇದೆ. ನೀವು ನಿಜವಾಗಿ ಕರ್ನಾಟಕದಲ್ಲಿ ಪ್ರತಿಪಕ್ಷವಾಗಿದ್ದರೆ, ಯಡಿಯೂರಪ್ಪ ಅವರ ಪುತ್ರ ವಿಜೇಂದ್ರ ಜೊತೆ ಹೊಂದಾಣಿಕೆ ಇರದೆ ಇದ್ದಲ್ಲಿ, ಸಿ ಡಿ ಬಿಡುಗಡೆ ಮಾಡಿ. ಇಲ್ಲವಾದಲ್ಲಿ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ, ಜಮೀರ ಎಲ್ಲರೂ ಸೇರಿ ಶಾಮೀಲ್ ಆಗಿದ್ದಾರೆ ಎಂದರ್ಥ ಎಂದು ವಾಗ್ದಾಳಿ ನಡೆಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿಗಿಂತ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಹೆಚ್ಚಿನ ಅನುದಾನ ಹೋಗುತ್ತಿದೆ. ಶಿಕಾರಿಪುರ, ಶಿವಮೊಗ್ಗಕ್ಕೆ ಹೆಚ್ಚಿನ ಅನುದಾನ ಹೋಗುತ್ತಿದೆ. ಬಾದಾಮಿಗೆ ಸಿದ್ದರಾಮಯ್ಯನವರ ಕ್ಷೇತ್ರಕ್ಕೆ ಅನುದಾನ ಕೊಟ್ಟಿರಿ. ಆದರೆ ಬಿಜೆಪಿ ಶಾಸಕರು ಅನುದಾನ ಕೇಳಲಿಕ್ಕೆ ಹೋದರೆ ವಿಷ ಕುಡಿಯಲಿಕ್ಕೆ ಹಣ ಇಲ್ಲವೆಂದು ಏಕೆ ತಿಳಿಸುತ್ತೀರಿ ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.