ಪಟಾಕಿ ಸಿಡಿಸಿ ಹರಕೆ ತೀರಿಸಿದ ಭಕ್ತರು ಬಾಗಲಕೋಟೆ :ಉತ್ತರ ಕರ್ನಾಟಕದಲ್ಲಿ ಮದ್ದಿನ (ಪಟಾಕಿ) ಜಾತ್ರೆಯೆಂದೇ ಪ್ರಖ್ಯಾತವಾಗಿರುವ ಬನಹಟ್ಟಿ ಶ್ರೀ ಕಾಡಸಿದ್ಧೇಶ್ವರ ಜಾತ್ರೆಗೆ ದೇಶದ ಹಲವೆಡೆಯಿಂದ ಭಕ್ತರು ಆಗಮಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ (ಪಟಾಕಿ) ಮದ್ದು ಹಾರಿಸುವುದರ ಮೂಲಕ ತಮ್ಮ ಹರಕೆ ಒಪ್ಪಿಸಿದರು.
ಪ್ರತಿ ವರ್ಷ ನಡೆಯುವ ಈ ಜಾತ್ರೆಯಲ್ಲಿ ರಥೋತ್ಸವ ಒಂದೆಡೆ ನಡೆಯುತ್ತಿದ್ದರೆ, ಅದೇ ಮಾರ್ಗದ ಮುಂದೆ ಭಕ್ತರು ನೂರು ರೂಪಾಯಿಯಿಂದ ಹಿಡಿದು ಲಕ್ಷಾಂತರ ರೂಪಾಯಿಗಳವರೆಗೂ ಪಟಾಕಿ ಸಿಡಿಸುತ್ತಾರೆ. ಕೆಲಸ, ಕಾರ್ಯಗಳಲ್ಲಿ ಯಶಸ್ಸು ಸಿಕ್ಕರೆ ಮುಂದಿನ ವರ್ಷ ಸಾವಿರಾರು ರೂಪಾಯಿಗಳ ಪಟಾಕಿ ಸಿಡಿಸುವುದಾಗಿ ಕಾಡಸಿದ್ದೇಶ್ವರ ದೇವರಿಗೆ ಭಕ್ತರು ಹರಕೆ ಹೊತ್ತುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಜಾತ್ರೆಗೆ ಬಂದು ದೇವರ ದರ್ಶನ ಪಡೆದ ನಂತರ ಪಟಾಕಿ ಸಿಡಿಸಿ, ಹರಕೆ ಈಡೇರಿಸುತ್ತಾರೆ.
ಹೀಗಾಗಿ ರಾತ್ರಿಯಿಡೀ ಪಟಾಕಿ ಸದ್ದು ಕಿವಿಗಪ್ಪಳಿಸುತ್ತಿರುತ್ತದೆ. ಹಿಂದಿನ ಕಾಲದಲ್ಲಿ ಕಾಡಿನಲ್ಲಿದ್ದ ಈ ದೇವಾಲಯಕ್ಕೆ ಭಕ್ತರು ದರ್ಶನಕ್ಕೆ ಬರಬೇಕಾದರೆ, ಕಾಡು ಪ್ರಾಣಿಗಳ ಭಯದಿಂದಾಗಿ ಪಟಾಕಿ ಸದ್ದು ಮಾಡುತ್ತಾ ಬರುತ್ತಿದ್ದರಂತೆ. ಈ ಪದ್ಧತಿ ಈಗ ಸಂಪ್ರದಾಯವಾಗಿದೆ. ಹೀಗಾಗಿ ಇಂದಿಗೂ ಪಟಾಕಿ ಸಿಡಿಸುತ್ತಾ ಇಲ್ಲಿಗೆ ಬರುವುದು ವಾಡಿಕೆ. ಪಟಾಕಿ ಸಿಡಿಸಿದರೆ ತಮ್ಮೆಲ್ಲಾ ಇಷ್ಟಾರ್ಥಗಳನ್ನು ದೇವರು ನೆರವೇರಿಸುತ್ತಾನೆ ಎಂಬುದು ಭಕ್ತರ ನಂಬಿಕೆ.
ಮಂಗಳವಾರ ರಾತ್ರಿ 8.00ಕ್ಕೆ ರಥೋತ್ಸವಕ್ಕೆ ಅದ್ಧೂರಿ ಚಾಲನೆ ದೊರೆಯಿತು. ಅದಕ್ಕೂ ಮುನ್ನ ವಿದ್ಯುದ್ದೀಪ ಹಾಗೂ ಅಪಾರ ಪ್ರಮಾಣದ ಹೂವುಗಳಿಂದ ಅಲಂಕೃತವಾದ ರಥಕ್ಕೆ (ತೆರಿಗೆ) ನಗರದ ಸಮಸ್ತ ಹಿರಿಯರು ಸಂಜೆ 6 ಗಂಟೆಗೆ ಪೂಜೆ ಸಲ್ಲಿಸಿ, ತೆಂಗಿನಕಾಯಿ ಒಡೆಯುವುದರ ಮೂಲಕ ಜಾತ್ರೆ ಆರಂಭ ಪಡೆಯಿತು.
'ಶ್ರೀ ಕಾಡಸಿದ್ಧೇಶ್ವರ ಮಹಾರಾಜ್ ಕೀ ಜೈ' ಎಂಬ ಜಯಘೋಷಗಳು, ಬಾನಂಗಳದಲ್ಲಿ ಹಾರಾಡಿದ ಪಟಾಕಿ ಸಡಗರದ ನಡುವೆ ವಿಜೃಂಭಣೆಯಿಂದ ಮೊದಲ ದಿನದ ಜಾತ್ರೆ ನೆರವೇರಿತು. ರಾಜ್ಯದ ಮೂಲೆ ಮೂಲೆಗಳಿಂದ ಮತ್ತು ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯ ಹಾಗೂ ವಿದೇಶಗಳಿಂದಲೂ ಭಕ್ತರು ಆಗಮಿಸಿ, ರಥೋತ್ಸವಕ್ಕೆ ಬೆಂಡು, ಬೆತ್ತಾಸು, ಉತ್ತತ್ತಿ ಎಸೆದು ಕೃತಾರ್ಥರಾದರು. ರಥೋತ್ಸವದ ಮುಂದೆ ಉಚ್ಚಾಯಿ, ನಂದಿಕೋಲ, ಸಂಬಾಳವಾದನ, ಕರಡಿ ಮಜಲು, ಶಹನಾಯಿ, ಡೊಳ್ಳು ಕುಣಿತ ಸೇರಿದಂತೆ ಹಲವು ಮಂಗಳವಾದ್ಯಗಳು ಮೊಳಗಿದವು. ಸುಮಾರು 1 ಗಂಟೆಗಳ ಕಾಲ ಮಂಗಳವಾರ ಪೇಟೆಯ ಪ್ರಮುಖ ರಸ್ತೆಯಲ್ಲಿ ಸಾಗಿಬಂತು.
ಜನಸಾಗರ: 3 ದಿನಗಳ ಕಾಲ ನಡೆಯುವ ವೈಶಿಷ್ಟ್ಯಪೂರ್ಣ ಶ್ರೀ ಕಾಡಸಿದ್ಧೇಶ್ವರ ಜಾತ್ರಾ ರಥೋತ್ಸವ ಮತ್ತು ಪಟಾಕಿ ಹಾರಿಸುವುದನ್ನು ವೀಕ್ಷಿಸಲು ಸುತ್ತಮುತ್ತಲಿನ ರಬಕವಿ, ಮಹಾಲಿಂಗಪುರ, ರಾಮಪುರ, ಹೊಸೂರ, ಯಲ್ಲಟ್ಟಿ, ಆಸಂಗಿ ಆಸ್ಕಿ, ಜಗದಾಳ, ನಾವಲಗಿ, ಚಿಮ್ಮಡ, ಹನಗಂಡಿ, ಹಳಿಂಗಳಿ, ತೇರದಾಳ, ಜಮಖಂಡಿ ಸೇರಿದಂತೆ ಹತ್ತಾರು ಊರುಗಳು, ವಿವಿಧ ತಾಲೂಕು, ಜಿಲ್ಲೆ ಹಾಗೂ ರಾಜ್ಯಗಳಿಂದ ಭಕ್ತ ಜನಸಾಗರವೇ ಹರಿದು ಬಂದಿತ್ತು. ರಥೋತ್ಸವದ ನಿಮಿತ್ತ ನಗರದ ಎಲ್ಲ ರಸ್ತೆಗಳು ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದವು.
ಜಾತ್ರೆಯಲ್ಲಿ ಮದ್ದು ಸುಡುವುದರ ಜೊತೆಗೆ ಅಪಾರ ಪ್ರಮಾಣದ ಹೂಮಾಲೆಗಳನ್ನು ಭಕ್ತರು ರಥಕ್ಕೆ ಅರ್ಪಿಸುತ್ತಾರೆ. ಹೀಗಾಗಿ, ಜಾತ್ರೆಯ ಪ್ರಯುಕ್ತ ಹೂವಿನ ಮಾರಾಟವೂ ಜೋರಾಗಿತ್ತು. ರಥದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಕಾಡಸಿದ್ದೇಶ್ವರರಿಗೆ ಭಕ್ತರು ಹೂವಿನ ಹಾರ ಮತ್ತು ಕಂಠಮಾಲೆಗಳನ್ನು ಅರ್ಪಿಸುವ ಮೂಲಕ ಭಕ್ತಿ ಮೆರೆಯುವುದು ಇಲ್ಲಿ ಪದ್ಧತಿ.
ಇದನ್ನೂ ಓದಿ:ಹಾವೇರಿಯಲ್ಲಿ ಗಣೇಶೋತ್ಸವಕ್ಕಾಗಿ ಅರಮನೆ ನಿರ್ಮಾಣ... ಗಣಪನ ವೀಕ್ಷಣೆಗೆ ಲಕ್ಷಾಂತರ ಜನರ ಭೇಟಿ