ಬಾಗಲಕೋಟೆ :ಪಿಎಫ್ಐ, ಎಸ್ಡಿಪಿಐ ಸಂಘಟನೆಗಳ ಜೊತೆಗೆ ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್, ಶ್ರೀರಾಮಸೇನೆ ಮತ್ತು ಭಜರಂಗದಳ ಹಾಗೂ ಸನಾತನ ಧರ್ಮ ಬ್ಯಾನ್ ಮಾಡಬೇಕು. ಯಾರೂ ಕೋಮುಭಾವನೆ ಕೆರಳಿಸುತ್ತಾರೋ ಅವರನ್ನ ಬ್ಯಾನ್ ಮಾಡಿ ನಮ್ಮದೇನು ಅಭ್ಯಂತರವಿಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಎಂ ಬಿ ಪಾಟೀಲ್ ತಿಳಿಸಿದರು.
ಬಾಗಲಕೋಟೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವನೋ ಒಬ್ಬ ಸ್ಟೇಟಸ್ ಹಾಕಿದ್ದರಿಂದ ಹುಬ್ಬಳ್ಳಿ ಗಲಾಟೆಯಾಯ್ತು. ಪ್ರಚೋದನೆ ಆಯ್ತು. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಕಾನೂನು ಕೈಯಲ್ಲಿ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ತಪ್ಪಿತಸ್ಥರು ಯಾರೇ ಇರಲಿ ಕ್ರಮ ಆಗಬೇಕು. ನಿರಪರಾಧಿಗಳಿಗೆ ಕಿರುಕುಳ ಮಾಡಬೇಡಿ ಎಂದರು.
ಆರ್‌ಎಸ್‌ಎಸ್ ದೇಶಭಕ್ತಿ ಸಂಘಟನೆ ಎನ್ನುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಇವರೆಲ್ಲಾ ಬ್ರಿಟಿಷರ ಏಜೆಂಟ್ ಆಗಿದ್ದರು ಎಂದು ಇಡೀ ಜಗತ್ತಿಗೆ ಗೊತ್ತಿದೆ. ಸಾವರ್ಕರ್ 3 ಸಾರಿ ಕ್ಷಮೆ ಕೋರಿ ಪತ್ರ ಬರೆದಿದ್ದರು.
ಬಿಜೆಪಿ, ಆರ್ಎಸ್ಎಸ್ನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಕೋಮು ಭಾವನೆ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ತಿದ್ದಾರೆ. ಜನರಿಗೂ ಸ್ವಲ್ಪ ದಿನದಲ್ಲಿ ಸತ್ಯ ಗೊತ್ತಾಗುತ್ತೆ. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಅದನ್ನು ಹಾಳು ಮಾಡಲು ಬಿಡಲ್ಲ ಎಂದರು.