ಬಾಗಲಕೋಟೆ: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ಹರ್ ಘರ್ ತಿರಂಗಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ದೇಶಾದ್ಯಂತ ಇದಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲೂ ಸಕಲ ಸಿದ್ಧತೆ ನಡೆಯುತ್ತಿದೆ. ಗ್ರಾಮೀಣ ಮಹಿಳಾ ಸಂಘದ ವತಿಯಿಂದ ರಾಷ್ಟ್ರಧ್ವಜ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಕಟಗೇರಿ ಗ್ರಾಮದಲ್ಲಿ ಶ್ರೀ ಚಾಮುಂಡೇಶ್ವರಿ ಸಂಜೀವಿನಿ ಯೋಜನಾ ಮಹಿಳಾ ಒಕ್ಕೂಟ ಇದೆ. ಈ ಮಹಿಳಾ ಒಕ್ಕೂಟ ಗ್ರಾಮೀಣ ಭಾಗದ ಮಹಿಳೆಯರ ಪಾಲಿಗೆ ವರದಾನವಾಗಿದ್ದು, ಕಟಗೇರಿ ಮತ್ತು ಕೊಂಕಣಕೊಪ್ಪ ವ್ಯಾಪ್ತಿಯ 92 ಮಹಿಳಾ ಸಂಘಗಳು ಇದರ ವ್ಯಾಪ್ತಿಯಲ್ಲಿವೆ.
ಈವರೆಗೆ ವಿವಿಧ ಕಾರ್ಯ ಚಟುವಟಿಕೆ ಹಮ್ಮಿಕೊಳ್ಳುತ್ತಾ ಬಂದಿರೋ ಈ ಮಹಿಳಾ ಒಕ್ಕೂಟಕ್ಕೆ ಇದೀಗ ರಾಷ್ಟ್ರಧ್ವಜದ ಸಿದ್ಧಪಡಿಸುವ ಜವಾಬ್ದಾರಿ ನೀಡಲಾಗಿದೆ. ತಮ್ಮ ಗುಳೇದಗುಡ್ಡ ತಾಲೂಕಿನಾದ್ಯಂತ ಅಗತ್ಯವಾಗಿರೋ 6,000 ರಾಷ್ಟ್ರಧ್ವಜ ಸಿದ್ಧಪಡಿಸಲು 30ಕ್ಕೂ ಅಧಿಕ ಮಹಿಳೆಯರು ಮುಂದಾಗಿದ್ದು, 14 ದಿನಗಳಲ್ಲಿ ಬರೋಬ್ಬರಿ 5,000ಕ್ಕೂ ಅಧಿಕ ಪ್ರಮಾಣದ ರಾಷ್ಟ್ರಧ್ವಜಗಳನ್ನು ತಯಾರಿಸಿದ್ದಾರೆ. ಇದು ನಮ್ಮ ಹೆಮ್ಮೆಯ ಕಾರ್ಯ ಎಂದು ಒಕ್ಕೂಟದ ಮುಖಂಡರಾದ ಶೀಲಾ ಮೇಟಿ ತಿಳಿಸಿದ್ದಾರೆ.