ಕರ್ನಾಟಕ

karnataka

ETV Bharat / state

ಹಳ್ಳಿಗಳಿಗೆ ವ್ಯಾಪಿಸಿದ ಸೋಂಕು: ಶಿರೂರ, ಮನ್ನಿಕಟ್ಟಿ ಗ್ರಾಮಕ್ಕೆ ಶಾಸಕ ಹಾಗೂ ಜಿಲ್ಲಾಧಿಕಾರಿ ಭೇಟಿ

ಕೊರೊನಾ ಸೋಂಕು ಈ ಬಾರಿ ಹಳ್ಳಿ - ಹಳ್ಳಿಗೂ ವ್ಯಾಪಿಸುತ್ತಿದೆ. ಈ ಹಿನ್ನೆಲೆ ಬಾಗಲಕೋಟೆಯ ಕೆಲವು ಹಳ್ಳಿಗಳಿಗೆ ಶಾಸಕ ವೀರಣ್ಣ ಚರಂತಿಮಠ ಹಾಗೂ ಜಿಲ್ಲಾಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳು ತೆರಳಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

mla
mla

By

Published : May 18, 2021, 10:09 PM IST

ಬಾಗಲಕೋಟೆ: ಕೊರೊನಾ ಎರಡನೇ ಅಲೆ ಹಳ್ಳಿಗಳಿಗೂ ಹರಡುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ತಾಲೂಕಿನ ಶಿರೂರ ಮತ್ತು ಮನ್ನಿಕಟ್ಟಿ ಗ್ರಾಮಗಳಿಗೆ ಶಾಸಕರಾದ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಒ ಟಿ.ಭೂಬಾಲನ ಭೇಟಿ ನೀಡಿ ಗ್ರಾಮದ ಜನರ ಆರೋಗ್ಯ ವಿಚಾರಿಸಿ ಅವರಿಗೆ ಆತ್ಮಸ್ಥೆರ್ಯ ತುಂಬುವ ಕಾರ್ಯ ಮಾಡಿದರು.

ಮಂಗಳವಾರ ಭೇಟಿ ನೀಡಿದ ಶಾಸಕರು ಮತ್ತು ಅಧಿಕಾರಿಗಳು ಗ್ರಾಮಗಳಲ್ಲಿ ಸಂಚರಿಸಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು. ಕೋವಿಡ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಸಂಚಾರದ ವೇಳೆಯಲ್ಲಿ ಕೋವಿಡ್ ಲಕ್ಷಣಗಳನ್ನು ಹೊಂದಿದವರಿಗೆ ಮೆಡಿಸಿನ್ ಕಿಟ್‍ಗಳನ್ನು ವಿತರಿಸಿದರು. ಕೋವಿಡ್ ಹಳ್ಳಿಯ ಕಡೆಗೂ ಪಸರಿಸುತ್ತಿದ್ದು, ಲಾಕ್‍ಡೌನ್ ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಬರದಂತೆ ಶಾಸಕ ವೀರಣ್ಣ ಚರಂತಿಮಠ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು.

ಪಾಸಿಟಿವ್ ಕೇಸ್‍ಗಳು ದೃಢಪಟ್ಟವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಸ್ಯಾಂಪಲ್ ತೆಗೆದುಕೊಂಡು ಪರೀಕ್ಷೆಗೆ ಕಳುಹಿಸುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಸೂಚಿಸಿದರು. ಕೆಮ್ಮು, ನೆಗಡಿ, ಜ್ವರ ಇದ್ದವರು ತಕ್ಷಣ ಸರಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಗ್ರಾಮದ ಆರೋಗ್ಯದ ದೃಷ್ಠಿಯಿಂದ ಬಿವಿವಿ ಸಂಘದ ವೈದ್ಯಕೀಯ ಮಹಾವಿದ್ಯಾಲಯದಿಂದ 9 ಜನ ಎಂಬಿಬಿಎಸ್ ವೈದ್ಯರನ್ನು ಶಿರೂರ ಮತ್ತು ಮನ್ನಿಕೇರಿ ಗ್ರಾಮಗಳಿಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

ಎರಡು ಗ್ರಾಮಗಳಲ್ಲಿ ವೈದ್ಯರ ಜೊತೆ ಸ್ಥಳೀಯ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕರನ್ನು ನೀಡಿ ತಂಡಗಳನ್ನು ರಚಿಸಿ ಆರೋಗ್ಯ ತಪಾಸಣೆ ಕೈಗೊಳ್ಳಲು ಕ್ರಮವಹಿಸುವಂತೆ ತಾಲೂಕು ವೈದ್ಯಾಧಿಕಾರಿ ಡಾ.ಅರವಿಂದ ಪಟ್ಟಣಶೆಟ್ಟಿ ಅವರಿಗೆ ಸೂಚಿಸಿದರು. ಗ್ರಾಮದ ಜನರು ಜಾಗೃತಿಯಿಂದ ಇರಬೇಕು. ಪಾಜಿಟಿವ್ ದೃಢಪಟ್ಟವನ್ನು ತಾಲೂಕಿನ ಕೋವಿಡ್ ಕೇರ್ ಸೆಂಟರ್​ಗೆ​ ದಾಖಲಿಸಬೇಕೆಂದು ತಿಳಿಸಿದ್ರು.

ಭೇಟಿ ಸಂದರ್ಭದಲ್ಲಿ ತಹಶೀಲ್ದಾರ್​​​​ ಗುರುಸಿದ್ದಯ್ಯ ಹಿರೇಮಠ, ತಾಲೂಕು ಆರೋಗ್ಯಾಧಿಕಾರಿ ಡಾ.ಅರವಿಂದ ಪಟ್ಟಣಶೆಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹಾಗೂ ಕೋವಿಡ್ ನೋಡಲ್ ಅಧಿಕಾರಿ ಮಂಜುನಾಥ ಡೋಂಬರ, ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ವಿನೋದ ಹಾದಿಮನಿ, ಗ್ರಾಮ ಲೆಕ್ಕಾಧಿಕಾರಿ ಆನಂದ ಅಳ್ಳಿಗಿಡದ, ಪಟ್ಟಣ ಪಂಚಾಯತ್​ ಮುಖ್ಯಾಧಿಕಾರಿ ಐ.ಜಿ.ಕೊಣ್ಣೂರ ಸೇರಿದಂತೆ ಇತರರು ಇದ್ದರು.

ABOUT THE AUTHOR

...view details